ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಔತಣಕೂಟ ರಾಜಕಾರಣ, ಅಧಿಕಾರ ಹಂಚಿಕೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿರುವುದನ್ನು ಗಂಭೀರ ವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್ ಇದಕ್ಕೆಲ್ಲ ತಡೆ ಹಾಕಲು ಮುಂದಾಗಿದ್ದು, ಡಿನ್ನರ್ ರಾಜಕಾರಣ, ಅಧಿಕಾರ ಹಂಚಿಕೆಯ ಚರ್ಚೆಯಲ್ಲಿ ತೊಡಗಿರುವ ನಾಯಕರುಗಳನ್ನು ದೆಹಲಿಗೆ ಕರೆಸಿ ಬುದ್ಧಿ ಹೇಳಲು ನಿರ್ಧರಿಸಿದೆ.
ಡಿನ್ನರ್ ರಾಜಕಾರಣ ನಡೆಸುತ್ತಿರುವ ನಾಯಕರುಗಳನ್ನು ದೆಹಲಿಗೆ ಕರೆಸಿ ಯಾರು ಯಾವುದೇ ರೀತಿಯ ಔತಣಕೂಟ, ರಾಜಕೀಯ ಸಭೆಗಳನ್ನು ಪಕ್ಷದ ಒಪ್ಪಿಗೆ ಇಲ್ಲದೆ ನಡೆಸಬಾರದು ಎಂದು ತಾಕೀತು ಮಾಡಲಿದೆ ಎಂದು ಹೈಕಮಾಂಡ್ ತಾಕೀತು ಮಾಡಲಿದೆ.
ಮುಂದಿನ ವಾರ ಕೆಲ ಸಚಿವರಿಗೆ ದೆಹಲಿಗೆ ಬರುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಸಂದೇಶ ರವಾನಿಸಿದ್ದು, ಇವರುಗಳ ಜತೆ ದೆಹಲಿಯಲ್ಲಿ ಸಭೆ ನಡೆಸಿ ಪಕ್ಷದ ಒಪ್ಪಿಗೆ ಇಲ್ಲದೆ ಯಾವುದೇ ರೀತಿಯ ಸಭೆಗಳನ್ನಾಗಲಿ, ಔತಣಕೂಟಗಳನ್ನಾಗಲಿ ಆಯೋಜಿಸಬೇಡಿ ಎಂಬ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯ ಕಾಂಗ್ರೆಸ್ನಲ್ಲಿ ಔತಣಕೂಟ ರಾಜಕಾರಣವನ್ನು ಸಚಿವರುಗಳು ಪೈಪೋಟಿ ಎಂಬAತೆ ಆಯೋಜಿಸುತ್ತಿದ್ದು, ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಜತೆಗೆ ಸಾರ್ವಜನಿಕವಾಗಿಯೂ ಬೇರೆ ರೀತಿಯ ಸಂದೇಶ ಹೋಗುತ್ತಿದೆ. ಕಾಂಗ್ರೆಸ್ನಲ್ಲೂ ಬಣ ರಾಜಕೀಯ ಮೇಳೈಸಿದೆ ಎಂಬ ಅಭಿಪ್ರಾಯ ಮೂಡುತ್ತಿದೆ. ಇದಕ್ಕೆಲ್ಲ ತಡೆ ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿರುವ ಕಾಂಗ್ರೆಸ್ ಹೈಕಮಾಂಡ್ , ಇನ್ನೆರೆಡು ವಾರಗಳಲ್ಲಿ ರಾಜ್ಯ ಕಾಂಗ್ರೆಸ್ನಲ್ಲಿನ ಡಿನ್ನರ್ ಪಾಲಿಟಿಕ್ಸ್, ಅಧಿಕಾರ ಹಂಚಿಕೆ ಚರ್ಚೆಗೆಲ್ಲ ಕೊನೆಯಾಡುತ್ತೇವೆ ಎಂಬ ಭರವಸೆ ನೀಡಿದೆ.
ಹಲವು ಸಚಿವರುಗಳು ಈ ರೀತಿಯ ಸಭೆಗಳನ್ನು ಆಯೋಜಿಸುವುದು ಸರಿಯಲ್ಲ, ನಾನೂ ಸಹ ಸಭೆ ನಡೆಸಲು ಶಕ್ತನಿದ್ದೇನೆ. ಆದರೆ, ಪಕ್ಷದ ಅಧ್ಯಕ್ಷನಾಗಿ ಈ ರೀತಿಯ ಸಭೆ, ಔತಣಕೂಟಗಳನ್ನು ನಡೆಸುವುದು ಸರಿಹೋಗುವುದಿಲ್ಲ. ಹಾಗಾಗಿ, ಔತಣಕೂಟ ಪಾಲಿಟಿಕ್ಸ್ ನಡೆಸಿರುವ ಸಚಿವರುಗಳಿಗೆ ತಿಳಿ ಹೇಳಿ ಎಂದು ಡಿ.ಕೆ ಶಿವಕುಮಾರ್ ಮನವಿ ಮಾಡಿದ್ದರು.
ರಾಜ್ಯ ಕಾಂಗ್ರೆಸ್ನಲ್ಲಿನ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್, ಔತಣಕೂಟ ಆಯೋಜಿಸಿ ರಾಜಕೀಯ ಚರ್ಚೆಗಳನ್ನು ನಡೆಸುತ್ತಿರುವ ಸಚಿವರುಗಳನ್ನು ದೆಹಲಿಗೆ ಕರೆಸಿ ಬುದ್ಧಿ ಹೇಳಲು ನಿರ್ಧರಿಸಿದೆ. ಅದರಂತೆ ಮುಂದಿನ ವಾರ ಡಿನ್ನರ್ ಪಾಲಿಟಿಕ್ಸ್ ನಡೆಸುತ್ತಿರುವ ಸಚಿವರುಗಳನ್ನು ದೆಹಲಿಗೆ ಬರುವಂತೆ ಸೂಚಿಸಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಹೈಕಮಾಂಡ್ ಮೂಲಕ ಡಿನ್ನರ್ ಪಾಲಿಟಿಕ್ಸ್ ತಡೆ ಹಾಕಿರುವ ಡಿ.ಕೆ ಶಿವಕುಮಾರ್ ಬಗ್ಗೆ ಸಿದ್ದರಾಮಯ್ಯ ಬಣದ ಕೆಲ ಸಚಿವರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದ್ದು, ಇವರುಗಳೆಲ್ಲ ಮುಂದಿನವಾರ ದೆಹಲಿಗೆ ಹೋಗಿ ಹೈಕಮಾಂಡ್ಗೆ ಎಲ್ಲವನ್ನೂ ವಿವರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಅಧಿಕಾರ ಹಂಚಿಕೆಯ ಈ ಕದನ ಕಾಂಗ್ರೆಸ್ನಲ್ಲಿ ಏನೆಲ್ಲ ಬೆಳವಣಿಗೆಗಳಿಗೆ ಕಾರಣವಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಡಿ.ಕೆ ಶಿವಕುಮಾರ್ ನೀಡಿರುವ ಚೆಕ್ಮೆಟ್ಗೆ ಸಿದ್ದರಾಮಯ್ಯ ಬಣದ ಸಚಿವರು ಯಾವ ರೀತಿ ತಿರುಗೇಟು ನೀಡಲಿದ್ದಾರೆ ಎಂಬುದು ಈಗ ಚರ್ಚೆಗೆ ಕಾರಣವಾಗಿದೆ.
ಒಟ್ಟಿನಲ್ಲಿ ಕಾಂಗ್ರೆಸ್ನಲ್ಲೂ ಈಗ ಗುಂಪುಗಾರಿಕೆ, ಬಣ ಬಡಿದಾಟ ಬಿರುಸಾಗಿದ್ದು, ಹೈಕಮಾಂಡ್ ಇದಕ್ಕೆಲ್ಲ ಸಧ್ಯದಲ್ಲೇ ಮದ್ದು ಅರೆಯಲಿದೆ.


