ಬೆಂಗಳೂರು : ಐಟೆಲ್ ಕಂಪನಿ ಸದ್ದಿಲ್ಲದೆ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಆ ಮೂಲಕ ತನ್ನ ತನ್ನ P65 ಸರಣಿಯನ್ನು ವಿಸ್ತರಿಸಿದೆ. ಹೌದು, ಈ ಸರಣಿಯ ಅಡಿಯಲ್ಲಿ ಹೊಸ ಮೊಬೈಲ್, ಐಟೆಲ್ P65C (itel P65C) ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ, ಐಟೆಲ್ P65C ಫೋನ್ ಜಾಂಬಿಯಾದಲ್ಲಿ ಮಾತ್ರ ಅನಾವರಣಗೊಂಡಿದ್ದು, ಮುಂಬರುವ ದಿನಗಳಲ್ಲಿ ಭಾರತ ಸೇರಿದಂತೆ ಇನ್ನಿತರ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.
ವಿಶೇಷವೆಂದರೆ, ಕಂಪನಿಯು ಈ ಫೋನನ್ನು ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಿದೆ. ಇದು 6.6 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಆಕ್ಟಾ-ಕೋರ್ Unisoc T606 ಪ್ರೊಸೆಸರ್‌ನೊಂದಿದೆ ಕೆಲಸ ಮಾಡುತ್ತದೆ. ಜೊತೆಗೆ, 5000mAh ಬ್ಯಾಟರಿ ಮತ್ತು 18W ವೇಗದ ಚಾರ್ಜರ್, ವರ್ಚುವಲ್ ತಂತ್ರಜ್ಞಾನದ ಸಹಾಯದಿಂದ 8GB RAM, 13 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಐಟೆಲ್ P65C ಫೋನಿನ ಬೆಲೆ ಎಷ್ಟು? ಕಂಪನಿಯು ಐಟೆಲ್ P65C ಮೊಬೈಲ್ ಅನ್ನು ಕೇವಲ ಒಂದೇ ಸ್ಟೋರೇಜ್ ಆಯ್ಕೆಯಲ್ಲಿ ಪರಿಚಯಿಸಿದೆ. ಇದು 4GB + 4GB ವರ್ಚುವಲ್ RAM ಮತ್ತು 128 GB ಸ್ಟೋರೇಜ್ ಅನ್ನು ಹೊಂದಿದೆ. ಜಾಂಬಿಯಾ ಮಾರುಕಟ್ಟೆಯಲ್ಲಿ ಈ ಫೋನಿನ ಬೆಲೆ ಸುಮಾರು 7,000 ರೂ. (K2,200) ಆಗಿದೆ. ಈ ದೇಶದ ಎಲ್ಲಾ ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ ಐಟೆಲ್ P65C ಫೋನನ್ನು ಖರೀದಿಸಬಹುದು. ಐಟೆಲ್ P65C ಫೋನಿನ ವಿನ್ಯಾಸ ಐಟೆಲ್ P65C ಸ್ಮಾರ್ಟ್‌ಫೋನ್ ಸ್ಟೈಲಿಶ್ ಲುಕ್ ಹೊಂದಿದೆ. ಈ ಫೋನಿನ ಹಿಂಭಾಗದ ಫಲಕದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಎಲ್‌ಇಡಿ ಫ್ಲ್ಯಾಷ್ ಕಾಣಬಹುದು. ಮತ್ತು ಫೋನಿನ ಬಲಭಾಗದಲ್ಲಿ ವಾಲ್ಯೂಮ್ ಬಟನ್‌ಗಳನ್ನು ನೀಡಲಾಗಿದೆ. ಮುಂಭಾಗದ ಫಲಕವು ಚಪ್ಪಟೆಯಾಗಿ ಕಂಡುಬಂದರೆ. ಪಂಚ್ ಹೋಲ್ ವಿನ್ಯಾಸವನ್ನು ನೀಡಲಾಗಿದೆ. ಪ್ರಸ್ತುತ ನೀವು, ಈ ಮೊಬೈಲ್ ಅನ್ನು ಮೂರು ಬಣ್ಣಗಳಲ್ಲಿ ಖರೀದಿಸಬಹುದು. ಇದು ಮೂನ್ಲಿಟ್ ಬ್ಲಾಕ್, ಅರೋರಾ ಬ್ಲೂ ಮತ್ತು ಬ್ರಿಲಿಯಂಟ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.
ಐಟೆಲ್ P65C ಫೋನಿನ ವೈಶಿಷ್ಟ್ಯಗಳು ಡಿಸ್ಪ್ಲೇ : ನೂತನ ಐಟೆಲ್ P65C ಫೋನ್ 6.6 ಇಂಚಿನ ಪಂಚ್-ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಉತ್ತಮ ಮತ್ತು ಸುಗಮ ಬಳಕೆದಾರ ಅನುಭವಕ್ಕಾಗಿ 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ.
ಪ್ರೊಸೆಸರ್ : ಐಟೆಲ್ P65C ಸ್ಮಾರ್ಟ್‌ಫೋನ್ ಪ್ರವೇಶ ಮಟ್ಟದ Unisoc T606 ಚಿಪ್‌ಸೆಟ್ ಅನ್ನು ಹೊಂದಿದೆ.ಇದು 12 ನ್ಯಾನೊಮೀಟರ್‌ಗಳನ್ನು ಆಧರಿಸಿದ ಆಕ್ಟಾ-ಕೋರ್ ಪ್ರೊಸೆಸರ್ ಆಗಿದೆ.
ಸ್ಟೋರೇಜ್ : ಕಂಪನಿಯು ಈ ಫೋನಿನಲ್ಲಿ ಒಟ್ಟು 8GB RAM ಅನ್ನು ಒದಗಿಸಿದೆ. ಅಂದರೆ, ಇದು 4GB ಅಂತರ್ಗತ RAM + 4GB ವರ್ಚುವಲ್ RAM ನ ಸಂಯೋಜನೆಯನ್ನು ಹೊಂದಿದೆ. ಇದರಲ್ಲಿ 128GB ಆಂತರಿಕ ಸ್ಟೋರೇಜ್ ಅನ್ನು ಒದಗಿಸಲಾಗಿದೆ.
ಕ್ಯಾಮೆರಾ : ಕಂಪನಿಯು ಹೊಸ ಐಟೆಲ್ P65C ಸ್ಮಾರ್ಟ್‌ಫೋನಿನ ಹಿಂದಿನ ಸೆಟಪ್‌ನಲ್ಲಿ LED ಫ್ಲ್ಯಾಷ್‌ನೊಂದಿಗೆ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಅಳವಡಿಸಿದೆ. ಅದರೊಂದಿಗೆ ಮತ್ತೊಂದು ಮಸೂರವನ್ನು ಜೋಡಿಸಲಾಗಿದೆ. ಸೆಲ್ಫಿ ಕ್ಯಾಮೆರಾ ಕೂಡ ಇದೆ.
ಬ್ಯಾಟರಿ : ಐಟೆಲ್ P65C ಮೊಬೈಲ್ ಅನ್ನು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಕಂಪನಿಯು ಡೇ-ಟು-ನೈಟ್ ಪವರ್ ಮ್ಯಾರಥಾನ್ ಎಂಬ ಅಡಿಬರಹದೊಂದಿಗೆ ಬ್ಯಾಟರಿಯನ್ನು ಪ್ರದರ್ಶಿಸಿದೆ. ಈ ಫೋನಿನೊಂದಿಗೆ 18W ವೇಗದ ಚಾರ್ಜರ್ ಅನ್ನು ನೀಡಲಾಗಿದೆ. ಇದರೊಂದಿಗೆ 10 ನಿಮಿಷಗಳ ಚಾರ್ಜ್‌ನಲ್ಲಿ 3 ಗಂಟೆಗಳ ಕಾಲ ಚಾಟ್ ಮಾಡಬಹುದು.