ಬೆಂಗಳೂರು : ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ವಿಪಕ್ಷ ನಾಯಕರು ಜಂಟಿಯಾಗಿ ಅಹೋರಾತ್ರಿ ಧರಣಿ ಕುಳಿತ್ತಿದ್ದು, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗುತ್ತಾ ರಾಮನ ಭಜನೆ ಮಾಡಿದ್ದಾರೆ .ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಅಹೋರಾತ್ರಿ ಧರಣಿಗೆ ಮುಂದಾಗಿವೆ. ವಿಧಾನಸಭೆಯಲ್ಲಿ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಮಾಜಿ ಮಾಜಿ ಸಚಿವರಾದ ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ ಸೇರಿ ಹಲವು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 14 ತಿಂಗಳಲ್ಲಿ ಎರಡು ದೊಡ್ಡ ಹಗರಣಗಳು ನಡೆದಿವೆ. ಒಂದು ಹಗರಣದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯನವರೇ ಭಾಗಿಯಾಗಿದ್ದಾರೆ. ಮೂರರಿಂದ ನಾಲ್ಕು ಸಾವಿರ ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಲೂಟಿ ಹೊಡೆದಿದ್ದಾರೆ. ಇದು ಜನರಿಗೆ ಹಂಚಬೇಕಾದ ನಿವೇಶನಗಳು, ಅದನ್ನು ಸಿಎಂ ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಾರೆ. ಇದು ಅಕ್ಷರಶಃ ಸ್ವಜನಪಕ್ಷಪಾತ ವಾಲ್ಮೀಕಿ ನಿಗಮ ಮಂಡಳಿಯಲ್ಲಿಯೂ ಕೂಡ ದಲಿತರ ಹಣ ಲೂಟಿ ಮಾಡಲಾಗಿದೆ. ದಲಿತರಿಗೆ ಮೀಸಲಿಟ್ಟ ಹಣ ಲೂಟಿಯಾಗಿದೆ, ಸದನದಲ್ಲಿ ಈ ಬಗ್ಗೆ ಮಾತನಾಡಲು ಅವಕಾಶ ಕೇಳಿದ್ದೇವೆ, ಆದ್ರೆ ಕೊಟ್ಟಿಲ್ಲ, ಸಿಎಂ ಉತ್ತರಿಸಿದ್ದಾರೆ. ನಾನು ಅಕ್ರಮ ಮಾಡಿಲ್ಲ ಅಂತಾರೆ ಅಕ್ರಮ ಮಾಡಿಲ್ಲ ಅಂದ್ರೆ ಚರ್ಚೆಗೆ ಏಕೆ ಭಯ ಪಡುತ್ತಿದ್ದಾರೆ ಎಂದು ಆರ್ ಅಶೋಕ್ ಪ್ರಶ್ನಿಸಿದ್ದಾರೆ. ಅದು ಮಾತ್ರವಲ್ಲ ಚರ್ಚೆ ಮಾಡೋಣ ಅಂದ್ರೆ ಸಿಎಂ ಹಾಗೂ ಅವರ ತಂಡ ಓಡಿ ಹೋಗುತ್ತಿದೆ. ಕಾನೂನು ಸಚಿವರು ಅಕ್ರಮ ನಡೆದಿದೆ ಅಂತಾರೆ. ಹಾಗಿದ್ರೆ ಅಪರಾಧಿ ಯಾರು, ಸಿಎಂ ಅವರೇ ಅಪರಾಧಿ, ನಿಲುವಳಿ ಮಂಡನೆಗೆ ಸಿದ್ಧರಾಗಿದ್ದೇವೆ, ಅದಕ್ಕೂ ಅವಕಾಶ ಕೊಡುತ್ತಿಲ್ಲ. ಸ್ಪೀಕರ್ ನಡೆಯೂ ಕೂಡ ಅನುಮಾನ ಮೂಡಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಮಗೆ ಮಾತನಾಡಲು ಅವಕಾಶ ಕೊಡುತ್ತಿಲ್ಲ ಎಂದು ಗುಡುಗಿದ್ದಾರೆ.
ಬಿಜೆಪಿ ಕಾರ್ಯಕರ್ತರು ಬಂದು ವಿಧಾನಸೌಧದ ಮೊಗಸಾಲೆಯಲ್ಲಿ ರಗ್ಗು ದಿಂಬು ಹೊದಿಕೆಗಳನ್ನು ಕೊಟ್ಟು ಹೋಗುತ್ತಿದ್ದಾರೆ. ಮಲಗಲು ನನಗೆ ಸ್ವಂತ ರಗ್ಗು ದಿಂಬು ಹೊದಿಕೆಯೇ ಬೇಕು ಎಂದು ಶಾಸಕ ಪ್ರಭು ಚೌವ್ಹಾಣ್ ತಮ್ಮದೇ ರಗ್ಗು ದಿಂಬು ಹೊದಕೆಯನ್ನು ತಂದಿದ್ದರು. ವಾಲ್ಮೀಕಿ ನಿಗಮ ಹಗರಣ ಬಾಣ ಬಿಟ್ಟಿದ್ದ ಬಿಜೆಪಿ, ಇಂದು ಮುಡಾ ಸೈಟು ಹಂಚಿಕೆ ಹಗರಣದ ಭರ್ಜಿಯನ್ನ ಸರ್ಕಾರದ ಮೇಲೆ ಎಸೆದಿದೆ. ಮುಡಾ ಚರ್ಚೆಗೆ ಅವಕಾಶ ಕೋರಿ ಬಿಜೆಪಿ ನಿಲುವಳಿ ಸೂಚನೆ ಮಂಡಿಸಿತ್ತು. ಆದ್ರೆ, ಚರ್ಚೆಗೆ ಅವಕಾಶ ಕೊಡಬೇಕೋ ಬೇಡ್ವೋ ಅನ್ನೋ ವಿಚಾರವಾಗಿ ದೊಡ್ಡ ಕದನವೇ ನಡೆದು ಹೋಯ್ತು. ಅಂತಿಮವಾಗಿ ಇದು ಹಳೆಯ ವಿಚಾರ, ತನಿಖಾ ಆಯೋಗ ರಚನೆಯಾಗಿದೆ ಅಂತೇಳಿ, ನಿಲುವಳಿಯನ್ನ ಸ್ಪೀಕರ್ ಖಾದರ್ ತಿರಸ್ಕರಿಸಿದ್ದು, ಇದೀಗ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ದ ಬಿಜೆಪಿ ಧ್ವನಿ ಎತ್ತಿದರೆ ಕಾಂಗ್ರೆಸ್ ಅಂತೂ ಏನು ನಡೆಯದಂತೆ ವರ್ತಿಸುತ್ತಿದೆ. ಒಟ್ಟಾರೆ ವಿಧಾನಸಭೆಯ ಮುಂಗಾರು ಅಧಿವೇಶನ ಇನ್ನು ಎರಡು ದಿನ ನಡೆಯಬೇಕಿದೆ. ಆದ್ರೆ ಇಷ್ಟು ದಿನ ನಡೆದ ಸದನದಲ್ಲಿ ಯಾವುದೇ ಪ್ರಮುಖ ಬೆಳವಣಿಗೆಗಳು ಆಗಿಲ್ಲ. ಸರಿಯಾದ ಚರ್ಚೆಗೆ ಈ ಮುಂಗಾರು ಅಧಿವೇಶನ ಸಾಕ್ಷಿಯಾಗಿಲ್ಲ. ಉಭಯ ಪಕ್ಷಗಳ ಕೆಸರೆರಚಾಟಕ್ಕಷ್ಟೇ ಸೀಮಿತವಾಗಿದೆ.


