ಬೆಂಗಳೂರು : ಗೌಡರ ಮೊಮ್ಮಗ ,ರಸಿಕರ ಒಡೆಯ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡುತಿದ್ದು ಈ ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತಂಡಕ್ಕೆ ಸಿಐಡಿಯಿಂದ 18 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪರಿಣಿತರ ತಂಡವನ್ನು ರಚಿಸಲಾಗಿದ್ದು, ಇಂದಿನಿಂದಲೇ ಕಾರ್ಯಾಚರಣೆ ಆರಂಭ ಸಾಧ್ಯತೆ ಇದೆ.ವಿಶೇಷ ಎಂದರೆ, ಪ್ರಾಥಮಿಕ ವರದಿಗಳ ಪ್ರಕಾರ, ವಿಡಿಯೋಗಳಲ್ಲಿರುವ ಮಹಿಳೆಯರಲ್ಲಿ ಬಹುತೇಕರು ಸರ್ಕಾರಿ ಅಧಿಕಾರಿಗಳು ಎಂಬ ಚಕಿತಗೊಳಿಸುವ ಅಂಶ ಬಯಲಾಗಿದೆ.
ಈ ಪ್ರಕರಣವನ್ನು ಭೇದಿಸಲು ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ 18 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿಯಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿಯಿದ್ದು, ವಿಡಿಯೋದಲ್ಲಿರುವ ಮಹಿಳೆಯರ ತನಿಖೆಗೆ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.ಎಸಿಪಿಗಳಾದ ಪ್ರಿಯದರ್ಶಿನಿ ಈಶ್ವರ್ ಸಾನಿಕೊಪ್ಪ, ಸತ್ಯನಾರಾಯಣ ಸಿಂಗ್, ಧನ್ಯ ಎನ್. ನಾಯ್ಕ್, ಪಿಐಗಳಾದ ಸುಮರಾಣಿ ಬಿ.ಎಸ್., ಸ್ವರ್ಣ ಬಿ.ಎಸ್., ಭಾರತಿ, ಹೇಮಂತ್ ಕುಮಾರ್, ರಾಜಾ ಜಿ.ಸಿ., ಪಿಎಸ್‌ಐಗಳಾದ ವೈಲೆಟ್ ಫ್ಲೆಮೀನಾ, ವಿನುತ, ನಂದೀಶ್, ಕುಮುದ, ಎಚ್‌ಸಿಗಳಾದ ಸುಮತಿ, ಮನೋಹರ, ಸುನೀಲ್ ಬೆಳವಲಗಿ, ಬಸವರಾಜ್ ಮೈಗೇರಿ, ಪಿಸಿಗಳಾದ ರಂಗಸ್ವಾಮಿ, ಸಿಂಧುರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಈ ನಡುವೆ ಡಿಜಿ ಅಲೋಕ್ ಮೋಹನ್ ಅವರು, “ಪ್ರಕರಣ ತನಿಖೆಗೆ ಎಸ್‌ಐಟಿ ರಚನೆಯಾಗಿದೆ. ತನಿಖೆ ನಡೆದಿದೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದ್ದು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ತನಿಖೆ ನಡೆಸಲು ಕೆಲವು ತಂಡಗಳನ್ನು ರಚನೆ ಮಾಡಲು ಈಗಾಗಲೇ ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಹೊಳೆನರಸೀಪುರ ನಗರ ಠಾಣೆಯಲ್ಲಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ ಎಸ್‌ಐಟಿ ತಂಡವು ಮೊದಲಿಗೆ ಸಂತ್ರಸ್ತೆಯ ಹೇಳಿಕೆಯನ್ನು ಪಡೆದುಕೊಳ್ಳಲಿದ್ದಾರೆ. ಇನ್ನು ಪ್ರಕರಣದ ಬಗ್ಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾದರೂ ಎಸ್ಐಟಿಗೆ ವರ್ಗಾವಣೆ ಆಗಲಿದೆ, ಹಾಗೆಯೇ ತನಿಖೆ ಭಾಗವಾಗಿ ವೈರಲ್ ವಿಡಿಯೊಗಳ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಲು ಎಸ್‌ಐಟಿ ಮುಂದಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಿದೆ.