ಬೆಂಗಳೂರು : ಶಿವರಾತ್ರಿ ಸಂದರ್ಭದಲ್ಲಿ ಈಶ ಫೌಂಡೇಶನ್ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿಯಾಗಿರುವುದು ರಾಜಕೀಯ ವಲಯದಲ್ಲಿ ವಿಭಿನ್ನ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಸ್ವತಃ ಡಿಸಿಎಂ ಶಿವಕುಮಾರ್, ನನ್ನನ್ನು ವಿರೋಧಿಸುವವರು ಸಾವಿರ ವಿರೋಧ ಮಾಡಲಿ. ಜಗ್ಗಿ ವಾಸುದೇವ ಗುರೂಜಿ ಹಾಗೂ ನನ್ನ ಸಂಬಂಧ ವೈಯಕ್ತಿಕ ಎಂದು ಸಮರ್ಥಿಸಿಕೊಂಡಿದ್ದಾರೆ.
ಸ್ವತಃ ಕಾಂಗ್ರೆಸ್ ಪಕ್ಷದಲ್ಲೇ ಭಾರಿ ವಿರೋಧ ವ್ಯಕ್ತವಾಗಿದ್ದರೂ ಶಿವಕುಮಾರ್ ತಲೆಕೆಡಿಸಿಕೊಳ್ಳದೇ ಗುರೂಜಿ ಭೇಟಿ ಮಾಡಲು ನಾನು ಯಾರ ಅನುಮತಿಯನ್ನೂ ಪಡೆಯಬೇಕಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿ ಮಾತನಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವರಾತ್ರಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಸಂಭಲಿಸಲಿದೆ ಎಂಬುದರ ಲಕ್ಷಣವಾಗಿದೆ. ನಾನು ಈ ಮೊದಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಾಟಕೀಯ ಬೆಳವಣಿಗೆ ನಡೆಯಲಿದೆ ಎಂದು ಹೇಳಿದ್ದೇನೆ ಎಂದು ಹೇಳಿದ್ದಾರೆ.
ಐತಿಹಾಸಿಕ ಕುಂಭಮೇಳ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ; ಜಗತ್ತಿನ ವಿವಿಧ ದೇಶಗಳಿಂದ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಸುಮಾರು ೬೫ ಕೋಟಿಗೂ ಹೆಚ್ಚು ಭಕ್ತಾದಿಗಳು, ಹಿಂದೂಗಳು ಬಂದು ಹೋಗಿದ್ದಾರೆ. ಹಿಂದುತ್ವ, ಪ್ರಾಚೀನ ಪರಂಪರೆ, ಸಂಸ್ಕೃತಿ ಬಗ್ಗೆ ವಿಶ್ವಾಸ ಇಟ್ಟುಕೊಂಡವರು ಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ. ಡಿ.ಕೆ.ಶಿವಕುಮಾರ್ ಕೂಡ ಅದೇ ರೀತಿ ಭಾಗಿಯಾಗಿರಬಹುದು ಎಂದು ವಿಶ್ಲೇಷಿಸಿದ್ದಾರೆ.