ಬೆಂಗಳೂರು : ಬೆಂಗಳೂರಿನ ಕೋಗಿಲು ಪ್ರದೇಶದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡು ಅತಿ ಹೆಚ್ಚು ಸಂಖ್ಯೆಯಲ್ಲಿ ವಾಸವಿದ್ದ ಕೇರಳಿಗರ ಸೂರನ್ನು ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ತೆರವುಗೊಳಿಸಿತ್ತು. ಇದು ವಿವಾದ ರೂಪ ಪಡೆದ ಬೆನ್ನಲ್ಲೇ ಈಗ ಈ ವಲಸಿಗರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಮನೆಯನ್ನು ಒದಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ಬಗ್ಗೆ ಸೋಮವಾರ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಅತಿಕ್ರಮಣ ತೆರವು ಕಾರ್ಯ ಹಿನ್ನೆಲೆ ಬೈಯಪ್ಪನಹಳ್ಳಿ ಸರ್ವೇ ನಂಬರ್ 23ರಲ್ಲಿ 1,187 ಮನೆ ನಿರ್ಮಾಣ ಮಾಡಲಾಗಿದೆ. ಈಗ ಮನೆ ಕಳೆದುಕೊಂಡ ಅರ್ಹ ವ್ಯಕ್ತಿಗಳಿಗೆ ಬೈಯಪ್ಪನಹಳ್ಳಿಯಲ್ಲಿರುವ ಬಹುಮಹಡಿ ಅಪಾರ್ಟ್ಮೆಂಟ್‌ಗಳಲ್ಲಿ ಮನೆ ನೀಡಲಾಗುವುದು. ಈಗ ತೆರವುಗೊಂಡ ಸ್ಥಳದಿಂದ ಸುಮಾರು 7 ಕಿಮೀ ದೂರದಲ್ಲಿ ಬೈಯಪ್ಪನಹಳ್ಳಿ
ಅಪಾರ್ಟ್ಮೆಂಟ್‌ಗಳಿವೆ. ಜನವರಿ 1ರ ಹೊಸ ವರ್ಷದ ದಿನದಂದು ಮನೆ ಹಂಚಿಕೆ ಮಾಡಲಾಗುವುದು.
ಪ್ರತಿಮನೆಗೆ 11.2೦ ಲಕ್ಷ ರೂ. ವೆಚ್ಚದಲ್ಲಿ ಈ ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ಕಾವೇರಿಯಲ್ಲಿ ಸೋಮವಾರ ಸನಡೆದ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಮುಂದಿನ ಎರಡು ದಿನಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಪಟ್ಟಿ ಸಲ್ಲಿಸಲಿದ್ದಾರೆ. ಮಾನವೀಯತೆಯ ಆಧಾರದಲ್ಲಿ ಜನವರಿ 1 ರಂದು ಸಂತ್ರಸ್ತರಿಗೆ ಮನೆ ವಿತರಣೆ ಮಾಡಲಾಗುವುದು ಎಂದರು. ಇದರಿAದ ಸಾಮಾನ್ಯ ವರ್ಗದವರಿಗೆ 8.7೦ ಲಕ್ಷ ರೂ., ಎಸ್‌ಸಿ,ಎಸ್‌ಟಿಗಳಿಗೆ 9 ಲಕ್ಷ ರೂ. ಸಬ್ಸಿಡಿ ಸಿಗಲಿದೆ. ಉಳಿದ ಸುಮಾರು 2 ಲಕ್ಷ ರೂ. ಹಣವನ್ನು ಸಂತ್ರಸ್ತರು ಭರಿಸಬೇಕಾಗುತ್ತದೆ. ಅದನ್ನು ವಸತಿ ಇಲಾಖೆಯಿಂದ ಸಾಲದ ರೂಪದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಕೋಗಿಲು ಬಡಾವಣೆಯಲ್ಲಿ ಡಿಸೆಂಬರ್ 2೦ರಂದು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಿದಂತಹ ಸುಮಾರು 167 ಶೆಡ್‌ಗಳನ್ನ ತೆರವುಗೊಳಿಸಲಾಗಿದೆ. ಅವರೆಲ್ಲರಿಗೂ ನೋಟಿಸ್ ನೀಡಲಾಗಿತ್ತು. ಸರ್ಕಾರಿ ಜಾಗ ಆಗಿದ್ದರಿಂದ ಖಾಲಿ ಮಾಡಲೇಬೇಕೆಂದು ತಿಳಿಸಲಾಗಿತ್ತು. ಆದರೂ ನಿವಾಸಿಗಳು ಖಾಲಿ ಮಾಡಿರಲಿಲ್ಲ. ನಿನ್ನೆ ವಸತಿ ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್, ಹಾಗೂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್ ಅವರನ್ನ ಜಾಗಕ್ಕೆ ಕಳಿಸಿದ್ದೆ. ಇಂದು ಡಿಸಿಎA ಡಿಕೆ ಶಿವಕುಮಾರ್ ಕೂಡ ಭೇಟಿ ಮಾಡಿದ್ದರು. ಆ ಜಾಗ ಕಸ ವಿಲೇವಾರಿ ಮಾಡಲು 15 ಎಕರೆ ಜಮೀನನ್ನ ನಗರ ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆಗೆ ಹಸ್ತಾಂತರ ಮಾಡಿದ್ದಾರೆ. ಪಾಲಿಕೆ ಕಸ ಹಾಕಲು ಬಳಸುತ್ತಿದ್ದು, ಪಾಲಿಕೆ ಸ್ವಾಧೀನದಲ್ಲಿದೆ ಎಂದು ವಿವರಿಸಿದರು. ಸುಮಾರು 2020-21 ರಿಂದ ಅಕ್ರಮವಾಗಿ ಶೆಡ್‌ಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಆ ಸಂಬAಧ ಪಾಲಿಕೆಯ ಕಂದಾಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ. ತಹಶಿಲ್ದಾರ್‌ಗಳಿಗೆ ಗೊತ್ತಿಲ್ಲದೆ ಅಕ್ರಮ ವಾಸ ಸಾಧ್ಯವೇ ಇಲ್ಲ. ಈ ರೀತಿ ಅತಿಕ್ರಮಣ ತಡೆಯಲು ಇನ್ನು ಮುಂದೆ ಅವಕಾಶ ನೀಡುವುದಿಲ್ಲ. ಈ ಸಂಬAಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಅಕ್ರಮ ಮನೆ ನಿರ್ಮಾಣವಾದರೆ ಸಂಬAಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವಿಚಾರವಾಗಿ ದೆಹಲಿಯಲ್ಲಿ ಕೆ.ಸಿ. ವೇಣುಗೋಪಾಲ್ ನನ್ನ ಜೊತೆ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ ಮಾಡಿದ್ದಾರೆ. ಅದೇ ಜಾಗೆಯಲ್ಲಿ ಮನೆ ಕಟ್ಟಿಕೊಡಲು ಆಗುವುದಿಲ್ಲ. ಅಕ್ರಮವಾಗಿ ಶೆಡ್ ಕಟ್ಟಿಕೊಂಡಿದ್ದಾರೆ. ಬೇರೆ ಕಡೆ ಪರ್ಯಾಯ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಹೇಳಿದ್ದೇನೆ. ಈ ಸಂಬAಧ ಜಿಬಿಎ ಆಯುಕ್ತರು ಹಾಗೂ ಬೆಂಗಳೂರು ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಸಲಹೆ ಕೊಟ್ಟಿದ್ದೇನೆ. ಸಂತ್ರಸ್ತರಾದವರಿಗೆ ಊಟ, ವಸತಿ ವ್ಯವಸ್ಥೆ ಮಾಡಿ ಎಂದೂ ಹೇಳಿದ್ದೇನೆ. ಈಗಾಗಲೇ ಅಧಿಕಾರಿಗಳು ಮೂರು ಕಡೆ ವ್ಯವಸ್ಥೆ ಮಾಡಿದ್ದಾರೆ. ಆದರೂ ಯಾರೂ ಕೂಡ ಅಲ್ಲಿಗೆ ಹೋಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ವಸತಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಮತ್ತಿತರರಿದ್ದರು.


