ಬೆಂಗಳೂರು ; ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಮ್.ಎನ್ . ರಾಜೇಂದ್ರ ಕುಮಾರ್ ಸಹಕಾರಿ ಕ್ಷೇತ್ರದಲ್ಲಿ ಅನಭಿಶಿಕ್ತ ದೊರೆಯಾಗಿ ಮೆರೆಯುತ್ತಿದ್ದಾರೆ. ಕಳೆದ ಮೂರು ದಶಕದಿಂದ ನಿರಂತರವಾಗಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡು ವಯಸ್ಸು 76 ಆದ್ರೂ ಇನ್ನೂ ಅಧಿಕಾರ ಬೇಕು ಎಂಬ ವ್ಯಾಮೋಹದಲ್ಲೇ ಇದ್ದಾರೆ ಅನಿಸುತ್ತದೆ. ಅಷ್ಟಕ್ಕೂ ಇವರಿಗೆ ಈ ವ್ಯಾಮೋಹ ಸಹಕಾರಿ ಕ್ಷೇತ್ರದ ಸೇವೆಗಾಗಿ ಅಂತು ಖಂಡಿತವಾಗಿಯೂ ಅಲ್ಲ ಬದಲಾಗಿ ಇವರ ಅಧ್ಯಕ್ಷ ಸ್ಥಾನ ಹೋಗುತ್ತಿದ್ದಂತೆ ತನ್ನ ಅವ್ಯವಹಾರಗಳು ಎಲ್ಲವೂ ಬಯಲಾಗಲಿದೆ ಎಂಬ ಭಯ ಇವರಿಲ್ಲಿದೆಯಾ ಎಂಬ ಪ್ರಶ್ನೆ ಕೂಡಾ ಎದುರಾಗಿದೆ.
ಎಂ.ಎನ್. ರಾಜೇಂದ್ರ ಕುಮಾರ್ ಅವರಲ್ಲಿ ಅಂತಹ ಒಂದು ಭಯ ಇದೆ ಅನ್ನೋದಿಕ್ಕೆ ಈ ಹಿಂದೆ ಅವರು ಪರಿಷತ್ ಚುನಾವಣೆಯಿಂದ ಹಿಂದೆ ಸರಿದಿರುವುದೇ ಸಾಕ್ಷಿಯಾಗಿದೆ ಎನ್ನಲಾಗಿದೆ. ಕೆಲ ವರ್ಷದ ಹಿಂದೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಪಡೆದುಕೊಂಡು ಅದೇನೆ ಆಗಲಿ ನಾನು ಸ್ಪರ್ಧಿಸಿಯೇ ಸಿದ್ಧ ಅಂತ ಚುನಾವಣ ಕಚೇರಿ ಕೂಡಾ ಓಪನ್ ಮಾಡಿದ್ದರು. ಆದ್ರೆ ಅಂದಿನ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಅವರ ಒಂದೇ ಒಂದು ಎಚ್ಚರಿಕೆ ಅವರನ್ನು ಚುನಾವಣೆಯಿಂದ ಹಿಂದೆ ಸರಿಯುವಂತೆ ಮಾಡಿತ್ತು. ಅಷ್ಟಕ್ಕೂ ಎಸ್ ಟಿ ಸೋಮಶೇಖರ್ ನೀಡಿದ ಆ ಎಚ್ಚರಿಕೆಯ ಮಾತು ಅವರ ಬುಡವನ್ನೇ ಅಲ್ಲಾಡಿಸುವಂತಹದಾಗಿತ್ತು. ಇದಕ್ಕೆ ಪೂರಕವಾಗಿಯೇ ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಲ್ಲಿ ಎಲ್ಲವೂ ಸರಿಯಿಲ್ಲ ಅಂತ ಆರ್ ಬಿ ಐ ಐದು ಲಕ್ಷ ದಂಡ ವಿಧಿಸಿದೆ. ಅಂದು ಎಸ್ ಟಿ ಸೋಮಶೇಖರ್ ಬ್ಯಾಂಕ್ ನಿಂದ ಪ್ರತಿ ವರ್ಷ ನವೋದಯ ಸ್ವ ಸಹಾಯ ಸಂಘದ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾವಣೆ ಆಗುತ್ತಿದೆ ಎಂದು ಆರೋಪ ಮಾಡಿದ್ದರು. ನಿಮ್ಮ ಮೇಲಿರುವ ಆರೋಪಕ್ಕೆ ನಿಮ್ಮನ್ನು ಅಧ್ಯಕ್ಷ ಸ್ಥಾನದಿಂದಲೇ ವಜಾ ಮಾಡುವ ಅಧಿಕಾರ ಸಹಕಾರಿ ಸಚಿವನಾದ ನನಗೆ ಇದೆ ಅಂತ ಎಚ್ಚರಿಕೆ ನೀಡಿದ್ದರು. ಮೊನ್ನೆ ಮಾಧ್ಯಮದವರಿಗೆ ನಿಮ್ಮ ದೊಣ್ಣೆ(ಲೋಗೋ ಮೈಕ್) ತೆಗೆದುಕೊಂಡು ಹೋಗಿ ಅಂತ ನಾಲಗೆ ಹರಿಬಿಟ್ಟ ಪತ್ರಿಕಾಗೋಷ್ಠಿಯಲ್ಲೇ ರಾಜೇಂದ್ರ ಕುಮಾರ್ ತನ್ನ ಸ್ವಸಹಾಯ ಸಂಘಕ್ಕೆ ಸಾಲ ನೀಡುತ್ತಿರುವ ವಿಚಾರ ಪ್ರಸ್ತಾಪ ಮಾಡಿದ್ದಾರೆ. ನವೋದಯ ಸ್ವಸಹಾಯ ಸಂಘಕ್ಕೆ ನೀಡುವ ಸಾಲ ಅದು ಮೈಕ್ರೋ ಫೈನಾನ್ಸ್ ವ್ಯಾಪ್ತಿಗೆ ಬರುವುದಿಲ್ಲ ಅಂತ ಸಾಬೂಬು ನೀಡಿದ್ದಾರೆ. ಆದ್ರೆ ಸರ್ಕಾರದ ಕಾನೂನು ಪ್ರಕಾರ ಅದು ಮೈಕ್ರೋ ಫೈನಾನ್ಸ್ ವ್ಯಾಪ್ತಿಗೆ ಬರುತ್ತದೆ ಅನ್ನೋದನ್ನು ಅವರು ಮರೆತು ಅದು ನನ್ನ ಅಭಿಪ್ರಾಯ ಅಂತ ಹೇಳಿದ್ದಾರೆ.
ನವೋದಯ ಸ್ವ ಸಹಾಯ ಸಂಘ ರಾಜೇಂದ್ರ ಕುಮಾರ್ ಅವರ ಟ್ರಸ್ಟ್ ಮೂಲಕ ನಡೆಯುತ್ತಿರುವ ಸಂಘ. ಇದಕ್ಕೆ ಜಿಲ್ಲಾ ಸಹಕಾರಿ ಬ್ಯಾಂಕಿನಿಂದ ಯಾವುದೇ ಕಾರಣಕ್ಕೂ ಸಾಲದ ರೂಪದಲ್ಲಿ ಹಣ ನೀಡುವಂತಿಲ್ಲ. ಆದರೆ ಇಲ್ಲಿ ಸಾಲ ನೀಡಿರುವ ವಿಚಾರವನ್ನು ಸ್ವತಃ ರಾಜೇಂದ್ರ ಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ.
ಇನ್ನು ಇದೇ ಸ್ವ ಸಹಾಯ ಸಂಘದ ಸದಸ್ಯರು ಇವರ ಬಹುತೇಕ ಎಲ್ಲಾ ಕಾರ್ಯಕ್ರಮದ ಪ್ರೇಕ್ಷಕ ವರ್ಗದವರಾಗಿರುತ್ತಾರೆ. ನವೋದಯ ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬಡ್ಡಿಗೆ ಸಾಲ ನೀಡಿ ಅವರನ್ನು ತನ್ನಿಷ್ಟಕ್ಕೆ ತಕ್ಕಂತೆ ಕುಣಿಸುವ ಅಭ್ಯಾಸ ರಾಜೇಂದ್ರ ಕುಮಾರ್ ಅವರಿಗೆ ಬಹಳ ವರ್ಷದಿಂದಲೇ ಇದೆ. ಹಿಂದೊಮ್ಮೆ ಮಹಿಳೆಯರ ಕೈನಿಂದ ಸಮಾವೇಶ ನಡೆಸಲು ಹಣ ವಸೂಲಿ ಮಾಡಲು ಹೋಗಿ ಮಾಧ್ಯಮಗಳ ಕೈನಲ್ಲಿ ರುಬ್ಬಿಸಿಕೊಂಡಿದ್ದರು. ಇದಾದ ಬಳಿಕ ಮಾಧ್ಯಮಗಳನ್ನು ತನ್ನ ಕೈಯಲ್ಲಿ ಇರಲಿ ಅಂತ ಒಂದು ಸಂದರ್ಭದಲ್ಲಿ ಮಾಧ್ಯಮದವರಿಗೂ ಕರೆದು ಕರೆದು ಸಾಲ ನೀಡಿ ಅವರನ್ನೂ ಸಾಲಗಾರನಾಗಿಸಿದ ಕೀರ್ತಿ ಇವರದ್ದು. ಇದಾದ ಬಳಿಕ ಸಹಜವಾಗಿಯೇ ಕೆಲವೊಂದಷ್ಟು ಮಾಧ್ಯಮದವರು ರಾಜೇಂದ್ರ ಕುಮಾರ್ ಅವರ ಮುಲಾಜಿಗೆ ಬಿದ್ದಿದ್ರು ಅನ್ನೋದು ಸುಳ್ಳಲ್ಲ. ಇದಾದ ಬಳಿಕ ಜಾಹಿರಾತು , ವೋಚರ್ , ಊಟ ಎಲ್ಲವೂ ಆರಂಭಿಸಿ ತನ್ನ ವಿರುದ್ಧ ಯಾವುದೇ ಸುದ್ಧಿ ಬಾರದಂತೆ ಸಾಕಷ್ಟು ಪ್ರಯತ್ನ ಮಾಡಿದ್ದು ಕೂಡಾ ಸುಳ್ಳಲ್ಲ. ಆದರೆ ಹಣೆ ಬರಹ ಕೆಟ್ಟರೆ ಶನಿ ಹೆಗಲೇರಿ ಕೂರುವಂತೆ ರಾಜೇಂದ್ರ ಕುಮಾರ್ ಕೋಲು ಗೀಲು ಅಂತ ಮಧ್ಯಾಹ್ನದ ಆ ಸೆಕೆಯಲ್ಲೂ ಅದ್ಯಾವ ನೀರು ಕುಡಿದು ಗಂಟಲು ಹರಿಬಿಟ್ಟರು ಅನ್ನೋದು ಗೊತ್ತಿಲ್ಲ. ರಾಜೇಂದ್ರ ಕುಮಾರ್ ಅವರ ಒಂದೊಂದು ವಿಚಾರಗಳನ್ನು ಕೆದಕಲು ಮಾಧ್ಯಮದವರು ಆರಂಭಿಸಿದ್ದಾರೆ. ಕೋಲು ಗೀಲು ಅಂತ ಹೇಳಿ ಕೋಲು ಕೊಟ್ಟು ಪೆಟ್ಟು ತಿನ್ನುವಂತ ಪರಿಸ್ಥಿತಿ ಅವರಿಗೆ ಎದುರಾಗಿದೆ.


