ಬೀದರ್ : ಪರೀಕ್ಷೆ ಬರೆಯಲು ಶಾಲೆಯಿಂದ ನೀಡಲಾದ ಪ್ರವೇಶ ಪತ್ರ (ಹಾಲ್ ಟಿಕೆಟ್) ಕುರಿ ತಿಂದ ಕಾರಣ ಮನನೊಂದ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ತಾಲೂಕಿನ ಗೋಕುಳ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಪರೀಕ್ಷೆಯ ಭಯದಿಂದ ಗೋಕುಳ ಗ್ರಾಮದ ನಿವಾಸಿ ಪೂಜಾ ಮಾರುತಿ ಮೇತ್ರೆ (14) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯಾಗಿದ್ದಾಳೆ.
ಗ್ರಾಮದ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿನಿಯ ಪ್ರವೇಶ ಪತ್ರ ಸೋಮವಾರ ಕುರಿ ತಿಂದಿದೆ.ಇದರಿಂದಾಗಿ ಆತಂಕಗೊಂಡು ಮನನೊಂದ ಈಕೆ ಶಾಲೆಯ ಮುಖ್ಯ ಗುರುಗಳ ಹೆಸರಿನಲ್ಲಿ ಪತ್ರ ಒಂದು ಬರೆದಿದ್ದು, ನನ್ನ ಪರೀಕ್ಷೆ ಪ್ರವೇಶ ಪತ್ರ( ಹಾಲ್ ಟಿಕೆಟ್)ಕಳೆದ ಕಾರಣ ನನಗೆ ಶಾಲೆಗೆ ಬರಲು ಆಗಲ್ಲ. ನಾನು ಸತ್ತು ಹೋಗುತ್ತಿದ್ದೆನೆ. ನನ್ನನ್ನು ಕ್ಷಮಿಸಿ ಬಿಡಿ ಎಂದು ವಿವರಿಸಿದ್ದಾಳೆ.
ಶಿಕ್ಷಕರ ಹೆಸರಿನಲ್ಲಿ ಬರೆದ ಪತ್ರ ತನ್ನ ಅಣ್ಣನ ಕೈಗೆ ನೀಡಿದ ಇವಳು ಸಂಜೆ 7 ಗಂಟೆ ಸುಮಾರಿಗೆ ಮನೆಯಿಂದ ನಾಪತ್ತೆಯಾಗಿದ್ದಾಳೆ.ಮನೆಯಿಂದ ಇವಳು ನಾಪತ್ತೆಯಾಗಿರುವುದನ್ನು ಗಮನಿಸಿದ ಸ್ಥಳೀಯರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಬಾವಿಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ. ರಾತ್ರಿ 11-30ರ ಸುಮಾರಿಗೆ ಈಕೆ ತನ್ನ ಸಂಬಂಧಿಕರ ಜಮೀನಿನಲ್ಲಿಯ ಬಾವಿಯಲ್ಲಿ ಅಳುತ್ತ ಕುಳಿತಿರುವುದು ಗಮನಿಸಿ ತಕ್ಷಣ ಬಾವಿಯಿಂದ ಮೇಲೆ ತಗೆದು ರಕ್ಷಣೆ ಮಾಡಿದ್ದಾರೆ. ಸುಮಾರು 30 ಅಡಿಗಳಷ್ಟು ಆಳವಾಗಿರುವ ಬಾವಿಯಲ್ಲಿ ನೀರು ಕಡಿಮೆ ಇರುವ ಕಾರಣ ಜೀವಕ್ಕೆ ತೊಂದರೆಯಾಗಿಲ್ಲ. ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.