ಬೀದರ್ : ಕ್ಷುಲ್ಲಕ ವಿಷಯಕ್ಕಾಗಿ ನಡೆದ ಜಗಳದಿಂದಾಗಿ ಉದ್ರಿಕ್ತ ಯುವಕರ ಗುಂಪೊಂದು ಪೊಲೀಸ್ ವಾಹನದ ಮೇಲೆ ಕಲ್ಲು ತುರಾಟ ನಡೆಸಿದ ಘಟನೆ ಬಸವಕಲ್ಯಾಣ ತಾಲೂಕಿನ ಬಟಗೇರಾ ಗ್ರಾಮದಲ್ಲಿ ಜರುಗಿದೆ.
ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಮಹಾಲಕ್ಷ್ಮೀ ದೇವಿ ಪಲ್ಲಕ್ಕಿ ಮೆರವಣಿಗೆ ವೇಳೆ ಬಟಗೇರಾ ಹಾಗೂ ಬಟಗೇರಾ ವಾಡಿ ಗ್ರಾಮದ ಯುವಕರ ಗುಂಪಿನ ಮಧ್ಯೆ ಜಗಳ ನಡೆದಿದ್ದು, ಜಗಳದಿಂದ ಉದ್ರಿಕ್ತಗೊಂಡ ಬಟಗೇರಾ ವಾಡಿ ಗ್ರಾಮದ ಯುವಕರ ಗುಂಪು ಸಂಜೆ ವೇಳೆ ಮತ್ತೆ ಬಟಗೇರಾ ಗ್ರಾಮಕ್ಕೆ ಆಗಮಿಸಿ ಪೊಲೀಸ್ ವಾಹನ ಸೇರಿದಂತೆ ಹಲವು ವಾಹನ ಹಾಗೂ ಕೈಗೆ ಸಿಕ್ಕವರ ಮೇಲೆ ಕಲ್ಲು ತುರಾಟ ನಡೆಸಿದೆ ಎಂದು ತಿಳಿದು ಬಂದಿದೆ.
ಕೈಯಲ್ಲಿ ಚಾಕು, ತಲ್ವಾರು ಹಾಗೂ ಬಂದೂಕುಗಳನ್ನು ಹಿಡಿದುಕೊಂಡು ಗಟಗೇರಾ ಗ್ರಾಮಕ್ಕೆ ಆಗಮಿಸಿದ ಉದ್ರಿಕ್ತ ಯುವಕರು, ಪೊಲೀಸ್ ವಾಹನದ ಮೇಲೆ ಕಲ್ಲು ಎತ್ತಿಹಾಕಿ ವಾಹನದ ಗಾಜುಗಳು ಪುಡಿ ಪುಡಿಗೊಳಿಸಿದೆ. ಕಲ್ಲು ತುರಾಟದಿಂದಾಗಿ ಎಎಸ್ಐ ಒಬ್ಬರಿಗೆ ಗಾಯಗಳಾಗಿದ್ದು, ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಇದೆ ವೇಳೆ ಕಿಡಿಗೇಡಿ ಯುವಕರು ತಂದಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಸಹ ಹಾರಿಸಲಾಗಿದೆ ಎನ್ನಲಾಗುತ್ತಿದೆ.
ಸುದ್ದಿ ತಿಳಿದ ಜಿಲ್ಲಾ ಎಸ್ಪಿ ಚನ್ನಬಸವಣ್ಣ ಲಂಗೋಟಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ಸಧ್ಯಕ್ಕೆ ಗ್ರಾಮದಲ್ಲಿ ವಾತಾವರಣ ಶಾಂತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬೀಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.


