ಬಾಗಲಕೋಟೆ : ಖಾಸಗಿ ಬಸ್ಗೆ ಹಿಂಬದಿಯಿಂದ ಕ್ರೂಸರ್ ವಾಹನ ಡಿಕ್ಕಿ ಹೊಡೆದು ಬಾಗಲಕೋಟೆ ಮೂಲದ ಐವರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ವಿಜಯಪುರ – ಗುಹಾಗರ್ ಹೆದ್ದಾರಿಯಲ್ಲಿ ರಾತ್ರಿ ಸಂಭವಿಸಿದೆ.
ಮೃತಪಟ್ಟವರನ್ನು ಕನಮಡಿ ಗ್ರಾಮದ ಅನುಸೂಯಾ ಮೋರೆ (56), ಲೋಕಾಪುರ ಗ್ರಾಮದ ನಿವೇದಿತಾ (17) ರೆಹಮತ್ ಪುರದ ಭಾಗ್ಯಶ್ರೀ ಅಂಬೇಕರ್ (18) ಹಾಗೂ ಅಡಿಹುಡಿ ಗ್ರಾಮದ ಉಜ್ವಲಾ ಸಿಂಧೆ (19) ಎಂದು ಗುರುತಿಸಲಾಗಿದೆ. ಇಂದು ಶಿವಾನಿ ಅಂಬೇಕರ್ ಮದುವೆಯಿತ್ತು. ಹೀಗಾಗಿ ಬುಧವಾರ ಅರಿಷಿಣ ಶಾಸ್ತ್ರ ಕಾರ್ಯಕ್ಕೆ ಇವರೆಲ್ಲ ಹೊರಟಿದ್ದರು.
ದುರ್ಘಟನೆಯಲ್ಲಿ ಇತರ 11 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಲ್ಲಿ ನಾಲ್ವರು ಸ್ಥಿತಿ ಗಂಭೀರವಾಗಿದೆ.
ಬಾಗಲಕೋಟೆಯ ಜಮಖಂಡಿಯ ಜನರು ಮದುವೆ ಸಮಾರಂಭಕ್ಕೆ ಎಂದು ಸಾಂಗ್ಲಿಯ ತಾಸಗಾಂವ್ ತಾಲೂಕಿನ ಸವರ್ಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಜಂಭುಲ್ವಾಡಿ ಗ್ರಾಮದ ಬಳಿ ಖಾಸಗಿ ಬಸ್??ಗೆ ಕ್ರೂಸರ್ ಗುದ್ದಿದೆ. ಬಸ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದ ರಭಸಕ್ಕೆ ಕ್ರೂಸರ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮಾಹಿತಿ ಅರಿತ ಅಕ್ಕಪಕ್ಕದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಸಾಂಗ್ಲಿಗೆ ಮದುವೆಗೆ ಎಂದು ಎರಡು ಕ್ರೂಸರ್ಗಳಲ್ಲಿ ಜನರು ಪ್ರಯಾಣಿಸುತ್ತಿದ್ದರು. ವಾಹನವು ನಜ್ಜುಗುಜ್ಜಾದ ಕಾರಣ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರತೆಗೆಯಲು ಸ್ಥಳೀಯರು ಸಾಕಷ್ಟು ಹರಸಾಹಸ ಪಡುವಂತಾಯಿತು.
ಅಪಘಾತದ ಬಳಿಕ ಬೆಂಕಿ ಹೊತ್ತಿಕೊಂಡಿದ್ದರಿಂದ ಭಾರಿ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು. ಆದರೆ, ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಿಯಂತ್ರಿಸಿದ್ದಾರೆ.
ಗಾಯಗೊಂಡವರನ್ನು ಧಲ್ಗಾಂವ್ಆ ರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಂಭೀರ ಸ್ಥಿತಿಯಲ್ಲಿ ಇರುವವರನ್ನು ಮೀರಜ್ನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.