ಬಾಗಲಕೋಟೆ ; ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಅನಗವಾಡಿ ಗ್ರಾಮದ ಬಳಿ ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ನಡೆದ ಅಪಘಾತದಲ್ಲಿ ನಾಲ್ವರು ಸಾವನಪ್ಪಿದ ಘಟನೆ ವರದಿಯಾಗಿದೆ.
ನಿದ್ದೆಯ ಮಂಪರಿನಿಂದಲೋ ಅಥವಾ ಚಾಲಕನ ನಿಯಂತ್ರಣ ತಪ್ಪಿ ಕಬ್ಬು ತುಂಬಿ ನಿಂತ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ ಹೊಡೆದು ನುಜ್ಜುಗುಜ್ಜಾದ ಘಟನೆ ನಡೆದಿದೆ. ಈ ಭೀಕರ ಅಪಘಾತದಲ್ಲಿ ಓರ್ವ ಮಹಿಳೆ,ಮೂವರು ಪುರುಷರು ಸೇರಿ ಒಟ್ಟು ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಅಪಘಾತದ ಸದ್ದು ಕೇಳಿ ಬಂದ ಸ್ಥಳೀಯರು, ಕೂಡಲೇ ಬೀಳಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಹಾಗೂ ಸ್ಥಳೀಯರು ಸೇರಿ ಶವ ಹೊರತೆಗೆಯಲು ಹರಸಾಹಸ ಪಡಬೇಕಾಯಿತು.
ಈ ಘಟನೆಯಲ್ಲಿ ಚಾಲಕ ಮಲ್ಲು ಪೂಜಾರಿ(25), ಕಲ್ಲು ಕವಟಗಿ(35), ಕಾಮಾಕ್ಷಿ ಬಡಿಗೇರ(30), ತುಕಾರಾಮ ತಳೇವಾಡ(30) ಎಂದು ತಿಳಿದುಬಂದಿದೆ .ಮೃತರೆಲ್ಲರು ವಿಜಯಪುರ ತಾಲ್ಲೂಕಿನ ಹೊನಗಳ್ಳಿ ಗ್ರಾಮದವರೆಂದು ತಿಳಿದಿದೆ .ಇವರಲ್ಲಿ ಕಲ್ಲು ಕವಟಗಿ ಎಂಬಾತ ಗ್ರಾಮ ಪಂಚಾಯತಿ ಸದಸ್ಯರಾಗಿದ್ದಾರೆ.
ನಾಲ್ಕು ಗಂಟೆಗೆ ಹೊಲಕ್ಕೆ ಹೋಗಿ ಬರುವಾಗ ಜೋರಾದ ಸದ್ದು ಕೇಳಿ ಬಂತು. ಹೋಗಿ ನೋಡಿದರೆ ಕಾರು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಈ ಬಗ್ಗೆ ಪ್ರತ್ಯಕ್ಷದರ್ಶಿ ಬಸು ಛಬ್ಬಿ ಎಂಬಾತ ‘ತಿಳಿಸಿದ್ದಾನೆ.ಅತಿ ವೇಗದಿಂದ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ, ಹಂಪ್ಸ್ ಇದ್ದರೂ ವೇಗ ಕಡಿಮೆ ಮಾಡದೆ ವೇಗವಾಗಿ ಓಡಿಸಿದ್ದಾನೆ. ಇದರಿಂದ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ ಎಂದು ಬಾಗಲಕೋಟೆ ಎಸ್ ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬನಶಂಕರಿ ದೇವಿ ಜಾತ್ರೆಗೆ ಎಂದು ಮನೆಯಿಂದ ಹೊರಟಿದ್ದರು. ನಂತರ ವಾಪಾಸ್ ವಿಜಯಪುರ ಕಡೆ ಹೊರಡುವಾಗ ಈ ದುರ್ಘಟನೆ ನಡೆದಿದೆ.ಈ ಕುರಿತು ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


