ಉಳ್ಳಾಲ : ನಿಂತಿದ್ದ ಬಸ್ಸನ್ನ ಓವರ್ ಟೇಕ್ ಮಾಡೋ ಭರದಲ್ಲಿದ್ದ ಕಾರೊಂದು ಸ್ಕೂಟರ್,ರಿಕ್ಷಾಕ್ಕೆ ಢಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿ ಮೇಲೆ ಹರಿದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಮುಡಿಪುವಿನಲ್ಲಿ ನಡೆದಿದೆ.
ಬೋಳಿಯಾರು ಗ್ರಾಮದ ಬಟ್ರಬೈಲು ನಿವಾಸಿ ಹರಿಶ್ಚಂದ್ರ -ಅರುಣಾಕ್ಷಿ ದಂಪತಿ ಪುತ್ರ ಕಾರ್ತಿಕ್ (14) ಮೃತ ಬಾಲಕ. ಮೃತ ಕಾರ್ತಿಕ್ ಮುಡಿಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದನು. ಶಾಲೆ ಬಿಟ್ಟು ಮನೆಗೆ ತೆರಳಲು ರಸ್ತೆಬದಿಯಲ್ಲಿ ನಿಂತಿದ್ದ ಬಾಲಕನಿಗೆ ಮುಡಿಪು ಕಡೆಗೆ ತೆರಳುತ್ತಿದ್ದ ಬ್ರಿಝ್ಝ ಕಾರು ಢಿಕ್ಕಿ ಹೊಡೆದಿದೆ. ಕಾರು ಚಾಲಕನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ತಂಗುದಾಣದಲ್ಲಿ ನಿಂತಿದ್ದ ಬಸ್ಸನ್ನ ಓವರ್ ಟೇಕ್ ಮಾಡೋ ಭರದಲ್ಲಿದ್ದ ಕಾರು ಬಾಲಕನ ಮೇಲೆರಗಿದೆ.
ಕಾರು ಚಲಾಯಿಸುತ್ತಿದ್ದ ಚಾಲಕನಿಗೆ ನಾಳೆ ಹೊಸ ಬ್ರಿಝ್ಝ ಕಾರು ಬರಲಿದ್ದು ಸ್ನೇಹಿತನ ಬ್ರಿಝ್ಝ ಕಾರಲ್ಲಿ ಹೆಚ್ಚಿನ ಚಾಲನೆ ಕಲಿಯುತ್ತಿದ್ದನಂತೆ.
ಘಟನೆ ನಡೆದಾಕ್ಷಣ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೃತ ಕಾರ್ತಿಕ್ ಅಕ್ಕ ಕೂಡ ಮುಡಿಪುವಿನ ಸರಕಾರಿ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿನಿಯಾಗಿದ್ದಾಳೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.