ಬಸವಕಲ್ಯಾಣ: ಮದುವೆಯಾದ ಮೂರೆ ದಿನಕ್ಕೆ ನವ ವಿವಾಹಿತೆಯನ್ನು ತವರು ಮನೆಗೆ ಕಳಿಸಿದ ಯುವಕನೊಬ್ಬ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪುಸುಲಾಯಿಸಿ ಅಪಹರಿಸಿಕೊಂಡು ಹೋದ ಘಟನೆ ತಾಲೂಕಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಸೋಲ್ಲಾಪೂರ ಜಿಲ್ಲೆಯ ಕುಸೂರ ಗ್ರಾಮದ ನಿವಾಸಿ ಪ್ರಕಾಶ ಕೋಳಿ (29) ಬಂಧಿತ ಆರೋಪಿ.
ಕಳೆದ ಅಗಸ್ಟ್ 10ರಂದು 16 ವರ್ಷದ ಬಾಲಕಿಗೆ ಪುಸುಲಾಯಿಸಿ ಮನೆಯಿಂದ ಅಪಹರಿಸಿಕೊಂಡು ಹೋದ ಈತ ಮಹಾರಾಷ್ಟ್ರದ ಪೂನಾದಲ್ಲಿ ಇರಿಸಿದ್ದ. ಈ ಕುರಿತು ಬಾಲಕಿ ಪಾಲಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ವಸೀಮ್ ಪಟೇಲ್ ನೇತೃತ್ವದ ಪೊಲೀಸ್ ತಂಡ ಖಚಿತ ಮಾಹಿತಿ ಮೆರೆಗೆ ಪೂನಾ ನಗರಕ್ಕೆ ತೆರಳಿ,ಆರೋಪಿಯುವಕನಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಯುವಕನಿಗೆ ಕೆಲ ವರ್ಷಗಳ ಹಿಂದೆಯೇ ಮದುವೆಯಾಗಿತ್ತು. ಮೊದಲ ಪತ್ನಿಗೆ ಇಬ್ಬರು ಪುತ್ರರಿದ್ದು, ಕಳೆದ ವರ್ಷ ಇವಳಿಗೆ ವಿಚ್ಚೇದನ ನೀಡಿದ್ದಾನೆ. ನಂತರ ಬಸವಕಲ್ಯಾಣ ತಾಲೂಕಿನ ಪಂಡರಗೇರಾ ಗ್ರಾಮದ ಯುವತಿಯೊಂದಿಗೆ ಇದೇ ಅಗಸ್ಟ್ ತಿಂಗಳಲ್ಲೇ 2ನೇ ವಿವಾಹವಾಗಿತ್ತು.ಮದುವೆಯಾದ ಮೂರೆ ದಿನಕ್ಕೆ ನವ ವಿವಾಹಿತೆಯನ್ನು ತವರು ಮನೆಯಲ್ಲೆ ಬಿಟ್ಟು, ಮೂರನೆ ಮದುವೆಗಾಗಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಿಂದ 16 ವರ್ಷದ ಅಪ್ರಾಪ್ತ ಬಾಲಕಿಗೆ ಪುಸುಲಾಯಿಸಿ ಮನೆಯಿಂದ ಅಪಹರಣ ಮಾಡಿಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿದೆ.