ಬಸವಕಲ್ಯಾಣ : ತಾಲೂಕಿನ ಹಾರಕೂಡನ ಶ್ರೀ ಚೆನ್ನ ರೇಣುಕ ಬಸವ ಮಂಟಪದಲ್ಲಿ ಶ್ರೀ ಚೆನ್ನಬಸವೇಶ್ವರ ಸಂಸ್ಥನ ಹಿರೇಮಠದಿಂದ ಗುರುವಾರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 82 ಮಹನೀಯರಿಗೆ ಶ್ರೀ ಮಠದಿಂದ ಶ್ರೀ ಗುರು ಸೇವಾ ರತ್ನ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
ಹಾರಕೂಡನ ಡಾ. ಚೆನ್ನವೀರ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಬಸವಕಲ್ಯಾಣ ತಾಲೂಕು, ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮಹನೀಯರು ಕುಟುಂಬ ಸಮೇತರಾಗಿ ಆಗಮಿಸಿದ್ದು ವಿಶೇಷವಾಗಿತ್ತು. ಶ್ರೀ ಗುರು ಸೇವಾರತ್ನ ಪ್ರಶಸ್ತಿಗೆ ಭಾಜನರಾದ ಸಾಧಕ ದಂಪತಿಗಳಿಗೆ ವೇದಿಕೆಯಲ್ಲಿ ಪ್ರಶಸ್ತಿ ಫಲಕದೊಂದಿಗೆ ನೆನಪಿನ ಕಾಣಿಕೆ ನೀಡಿ ಹಾರಕೂಡ ಶ್ರೀಗಳು ಸತ್ಕರಿಸಿ ಆಶಿರ್ವದಿಸಿದರು.
ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾಜಿ ಸಚಿವ ರಾಜಶೇಖರ ಬಿ. ಪಾಟೀಲ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಗುರುತಿಸಿ ಹಾರಕೂಡ ಶ್ರೀಗಳು ಸತ್ಕರಿಸುತ್ತಿರುವದು ಸಮಾಜ ಮುಖಿ ಕಾರ್ಯವಾಗಿದೆ ಎಂದು ಬಣ್ಣಿಸಿದರು.
ಹಾರಕೂಡ ಶ್ರೀ ಮಠ ಯಾವುದೇ ಒಂದು ಜಾತಿಗೆ ಸೀಮಿತವಲ್ಲ ಎಲ್ಲಾ ಸಮುದಾಯದವರಿಗೂ ಈ ಮಠದಲ್ಲಿ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಇಂದು 82 ಜನ ಮಹನೀಯರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಅಲ್ಲದೆ ಶ್ರೀ ಮಠದಲ್ಲಿ ದಾಸೋಹಕ್ಕೆ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಈ ಮಠ ಕಲ್ಯಾಣ ಕರ್ನಾಟಕ, ರಾಜ್ಯ ಅಲ್ಲದೆ ತಿರುಪತಿ, ಶಿರಡಿ ಮಾದರಿಯಲ್ಲಿ ದೇಶದಲ್ಲಿಯೇ ಹೆಸರು ಮಾಡಲಿ ಎಂದು ಆಶಿಸಿದರು.
ನಾನು ಶ್ರೀ ಮಠಕ್ಕೆ ಮಾಜಿ ಸಚಿವನಾಗಿ ಬಂದಿಲ್ಲ ಶ್ರೀ ಮಠದ ಪರಮ ಭಕ್ತನಾಗಿ ದಂಪತಿ ಸಮೇತ ಆಗಮಿಸಿದ್ದೇವೆ. ಈ ಮಠದ ಮೇಲೆ ನಮ್ಮ ಕುಟುಂಬದವರಿಗೆ ನಂಬಿಕೆ ಹಾಗೂ ವಿಶ್ವಾಸವಿದ್ದ ಕಾರಣ ನಾವು ಈ ಮಠಕ್ಕೆ ನಡೆದುಕೊಳ್ಳುತ್ತೇವೆ ಎಂದ ಅವರು ಕಳೆದ ವಿಧಾನ ಸಭಾ ಕ್ಷೇತ್ರದ ಚುನಾವಣೆ ಸೋತ ಬಳಿಕ ಯಾವುದೇ ವೇದಿಕೆ ಹಂಚಿಕೊಂಡಿಲ್ಲ ಶ್ರೀಗಳು ದೂರವಾಣಿ ಕರೆ ಮಾಡಿ ಸಮಾರಂಭ ಉದ್ಘಾಟಿಸಲು ಸಂಪತಿ ಸಮೇತ ಆಗಮಿಸಬೇಕು ಎಂದು ಆದೇಶ ನೀಡಿದ್ದರು. ಹೀಗಾಗಿ ಕುಟುಂಬ ಸಮೇತರಾಗಿ ಶ್ರೀ ಮಠದ ಪರಮ ಭಕ್ತರಾಗಿ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದೇವೆ ನಾನು ಚುನಾವಣೆಯಲ್ಲಿ ಮಾತ್ರ ಸೋತಿದ್ದೇನೆ ಹೊರತು ಸತ್ತಿಲ್ಲ ಜನರ ಮಧ್ಯೆ ಉಳಿದು ಕೆಲಸ ಮಾಡುವೆ ಎಂದು ತಿಳಿಸಿದರು.
ಹಾರಕೂಡ ಶ್ರೀಗಳು ನಡೆದಾಡುವ ದೇವರು ಅವರು ನೀಡಿವ ವಾಣಿಯನ್ನು ಆಲಿಸಿದರೆ ಮನಸ್ಸಿಗೆ, ಶಾಂತಿ, ನೆಮ್ಮದಿ ಸಿಗುತ್ತದೆ. ಅವರು ತೋರಿದ ಮಾರ್ಗದಲ್ಲಿ ಮುನ್ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು. ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು.
ಈ ವೇಳೆ ಹಾರಕೂಡನ ಡಾ. ಚೆನ್ನವೀರ ಶಿವಾಚಾರ್ಯರು ಸಮಾರಂಭದ ಸಾನಿಧ್ಯ ವಹಿಸಿದರು. ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯ ಜಗನ್ನಾಥ ಪಾಟೀಲ ಮಂಠಾಳ, ಮಾಲಾ ಬಿ.ನಾರಾಯಣರಾವ, ಸುಭಾಷ ಮುರುಡ ಬೆಳಮಗಿ, ರಾಜಕುಮಾರ ಬಿರಾದಾರ ಸಿರಗಾಪೂರ, ಕಾಶಪ್ಪಾ ದೇಗಾಂವ, ಸಿದ್ರಾಮಪ್ಪಾ ಗುದಗೆ ಹಾರಕೂಡ, ವಿಜಯಕುಮಾರ ಸಂಗೋಳಗಿ, ಬಾಬು ಹೊನ್ನಾನಾಯಕ ಸೇರಿದಂತೆ ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು. ಅಂಬಾರಾಯ ಉಗಾಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಸ್ಯ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿದರು.


