ಬಸವಕಲ್ಯಾಣ : ಪತ್ನಿಗೆ ಮಾನಸಿಕ ಮತ್ತು ದೈಹಿಕ ಕಿರುಳ ನೀಡಿ ಕೊಲೆ ಮಾಡಿದ ಪತಿಯೊಬ್ಬನಿಗೆ ಜೀವಾವಧಿ ಶಿಕ್ಷೆನೀಡಿ ಇಲ್ಲಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ತಾಲೂಕಿನ ಯದಲಾಪೂರ ಗ್ರಾಮದ ನಿವಾಸಿ ತುಕಾರಾಮರೆಡ್ಡಿ ಟೊಣ್ಣೆ (52) ಶಿಕ್ಷೆಗೆ ಗುರಿಯಾದ ವ್ಯಕ್ತಿ.
2014ರಲ್ಲಿ ಸಿರ್ಸಿ ಔರಾದನ ಪೂಜಾ ಎನ್ನುವಳ ಜೊತೆಗೆ ವಿವಾಹವಾದ ಈತ ಮದುವೆಯಾದ ಎರಡು ವರ್ಷ ಕಳೆಯುವಷ್ಟರಲ್ಲೇ ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಆಕೆಯ ಮೇಲೆ ಸಿಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ.
ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಪಿಐ ಶಿವನಗೌಡ ಪಾಟೀಲ್ ಅವರು ಪ್ರಕರಣದ ಕುರಿತು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.
ಪ್ರಕರಣ ಕುರಿತು ವಿಚಾರಣೆ ನಡೆಸಿದ ಬಸವಕಲ್ಯಾಣದ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಘವೇಂದ್ರ ಚನ್ನಬಸಪ್ಪ ನವರು ಆರೋಪಿತನಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ 2.56 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ಬಸವಂತ ರೆಡ್ಡಿ ವಾದಮಂಡಿಸಿದ್ದಾರೆ.


