ಬಸವಕಲ್ಯಾಣ: ಹಾಲು ತಗೆದುಕೊಂಡು ಹೋಗದ ಕೆಎಮ್ಎಫ್ ಕ್ರಮ ಖಂಡಿಸಿ ರೈತರು ನೂರಾರು ಲೀಟರ್ ಹಾಲು ರಸ್ತೆಗೆ ಚಲ್ಲಿ ಪ್ರತಿಭಟನೆ ನಡೆಸಿದ ಪ್ರಸಂಗ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಜರುಗಿದೆ.
ಕಳೆದ 2 ದಿನಗಳಲ್ಲಿ ಹಾಲು ತಗೆದುಕೊಂಡು ಹೋಗುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ರಸ್ತೆ ಮೇಲೆ ಹಾಲು ಸುರಿದು ಕೆಎಮ್ಎಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಪ್ರಮುಖರು ಆದ ಗ್ರಾಪಂ ಸದಸ್ಯ ಈಶ್ವರ ಬೋಕ್ಕೆ ಮಾತನಾಡಿ, ಕೆಎಮ್ಎಫ್’ನಿಂದ ಹಾಲು ತಗೆದುಕೊಂಡು ಹೋಗದ ಕಾರಣ ರೈತರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಇದರಿಂದ ಸಾವಿರಾರು ರೂ.ನಷ್ಟ ಅನುಭವಿಸಬೇಕಾಗಿದೆ ಎಂದು ಅಳಲು ತೋಡಿಕೊಂಡರು.
ಗ್ರಾಪಂ ಸದಸ್ಯರಾದ ಉದಯಬಾನ್ ಬಿರಾದಾರ, ದತ್ತು ಬೊಕ್ಕೆ, ಶಿಲ್ಪಾ ದಯಾನಂದ, ರೈತರಾದ ದತ್ತಾ ಬಿರಾಜದಾರ, ಅಜೀತ್ ಜಾಧವ, ಬಾಜಿರಾವ ಬಿರಾದಾರ, ಶಿವಾಜಿ ಮುರಾರಿ ಸೇರಿದಂತೆ ಗ್ರಾಮದ ರೈತರು ಉಪಸ್ಥಿತರಿದ್ದರು.
ರೈತರ ಪ್ರತಿಭಟನೆ ಸುದ್ದಿ ತಿಳಿದ ಕೆಎಮ್ಎಫ್ ಅಧಿಕಾರಿ ಶಿವಾನಂದ, ಪ್ರವೀಣ್ ಹಾಗೂ ಕೆಎಮ್ಎಫ್ ಬಂಡು ಕುಲಕರ್ಣಿ ಗ್ರಾಮಕ್ಕೆ ಭೇಟಿನೀಡಿ, ಗ್ರಾಮದಲ್ಲಿ ಹಾಲು ಉತ್ಪಾದಕರ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡದ ಕಾರಣ ಹಾಲು ಸಾಗಿಸುವುದು ಸ್ಥಗಿತಗೊಳಿಸಲಾಗಿತ್ತು.
ಸದ್ಯಕ್ಕೆ ತಾತ್ಕಾಲಿಕವಾಗಿ ಹಾಲು ತಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಶೀಘ್ರವಾಗಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಿಗೆ ಸೂಚಿಸಿದರು.


