ಬಸವಕಲ್ಯಾಣ : ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಲುಕಿದ್ದು, ಕೂಡಲೇ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಇಲ್ಲಿಯ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳ ನಿಯೋಗದಿಂದ ಇಲ್ಲಿಯ ಮಿನಿ ವಿಧಾನಸೌಧಕ್ಕೆ ತೆರಳಿ ಬೇಡಿಕೆ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರ ಕಚೇರಿ ಅಧಿಕಾರಿ ಯಾದೇಶ್ ಅವರಿಗೆ ಸಲ್ಲಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ರೈತರು ಬಿತ್ತಿದ ಬೆಳೆಗಳೆಲ್ಲ ಒಣಗಿ ಹೊಗಿದ್ದು, ಬೆಳೆ ಕಳೆದು ಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ದಶಕದಿಂದ ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದಾಗಿ ಬೆಳೆ ಕಳೆದುಕೊಂಡ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ, ತಕ್ಷಣ ರಾಜ್ಯ ಸರ್ಕಾರ ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕು ಸೇರಿದಂತೆ ಬೀದರ್ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವ ಜೊತೆಗೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ, ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಕಲ್ಪಿಸಬೇಕು, ರೈತರ ಜಮೀನುಗಳಿಗೆ ಸಮಪರ್ಕ ವಿದ್ಯುತ್ ಸೌಕರ್ಯ ಕಲ್ಪಿಸಬೇಕು, ಬೆಳೆ ಹಾನಿಗೊಳಿಸುತ್ತಿರುವ ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ರುದ್ರಯ್ಯ ಸ್ವಾಮಿ, ಪ್ರಮುಖರಾದ ವೀರಾರೆಡ್ಡಿ ಪಾಟೀಲ್, ಸಂತೋಷಕುಮಾರ ಗುದಗೆ, ಇಕ್ರಾಮ್ ಖಾದಿವಾಲೆ, ಕಮಳಾಬಾಯಿ ಮಡ್ಡೆ, ಬಸವರಾಜ ಬಂಡೆ, ಮಹೇಶ ಬಂಡೆ, ಕಾಶಪ್ಪ ಬಿರಾದಾರ, ಅಂಬಾರಾಯ ಕರಹರಿ, ರಾಜಕುಮಾರ ಹೊಳ್ಳೆ, ಖಾನ್ ಸಾಬ್, ಸುನೀಲ್ ರಾಜೋಳೆ ಸೇರಿದಂತೆ ಸಂಘದ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.


