ಬರೇಲಿ : ಶನಿವಾರ ರಾತ್ರಿ ನೈನಿತಾಲ್ ಹೆದ್ದಾರಿಯಲ್ಲಿ ಎದುರುಗಡೆಯಿಂದ ಬರುತ್ತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಎಂಟು ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಭೋಜಿಪುರದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮೃತರಲ್ಲಿ ಏಳು ವಯಸ್ಕರು ಮತ್ತು ಒಂದು ಮಗು ಸೇರಿದೆ. ಕುಟುಂಬವು ಉತ್ತರಾಖಂಡದ ಬಹೇದಿ ಗ್ರಾಮದ ನಿವಾಸಿಗಳೆಂದು ತಿಳಿದಿದೆ.
ಡಿಕ್ಕಿಯ ರಭಸಕ್ಕೆ ಅವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲಿದ್ದ ಎಲ್ಲ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟೈರ್ ಪಂಕ್ಚರ್ ಆದ ನಂತರ ಎಸ್ಯುವಿಯ ಕಾರು ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ.
“ಭೋಜಿಪುರ ಸಮೀಪದ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಕಾರೊಂದು ಟ್ರಕ್ಗೆ ಡಿಕ್ಕಿ ಹೊಡೆದಿದೆ. ಕಾರು ಎಳೆದೊಯ್ದು ನಂತರ ಬೆಂಕಿ ಹೊತ್ತಿಕೊಂಡಿದೆ. ಕಾರನ್ನು ಸೆಂಟ್ರಲ್ ಲಾಕ್ ಮಾಡಲಾಗಿತ್ತು, ಆದ್ದರಿಂದ ಕಾರಿನಲ್ಲಿದ್ದ ಜನರು ಬೆಂಕಿಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಅಪಘಾತದ ಸ್ಥಳಕ್ಕೆ ಪೊಲೀಸ್ ತಂಡವು ತ್ವರಿತವಾಗಿ ಆಗಮಿಸಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ವಾಹನಗಳನ್ನು ಕರೆಸಲಾಯಿತು. ಆದರೆ ಕಾರಿನ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಒಳಗಿದ್ದವರು ಸಜೀವ ದಹನವಾಗಿದ್ದಾರೆ ಎಂದು ಎಸ್ಎಸ್ಪಿ ಘುಲೆ ಸುಶೀಲ್ ಚಂದ್ರಭಾನ್ ಅವರು ಮಾಧ್ಯಮಕ್ಕೆ ಮಾಹಿತಿ ತಿಳಿಸಿದ್ದಾರೆ.


