ಬನವಾಸಿ: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದೆ.
ಸಮೀಪದ ಮಧುರವಳ್ಳಿ ಗ್ರಾಮದ ರಾಮಕುಮಾರ್ ಮೃತ ವಿದ್ಯಾರ್ಥಿ. ಇಲ್ಲಿಯ ನಾಗಶ್ರೀ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಸಂಜೆ 4ಘಂಟೆಗೆ ತನ್ನ ನಾಲ್ಕು ಜನ ಸ್ನೇಹಿತರ ಜೊತೆಯಲ್ಲಿ ಹಾಡಲಗಿ ಗ್ರಾಮದ ಕನಕಪುರ ಕೆರೆಯಲ್ಲಿ ಆಟವಾಡಲು ತೆರಳಿದ್ದಾರೆ. ಮೃತ ವಿದ್ಯಾರ್ಥಿ ರಾಮಕುಮಾರ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬನವಾಸಿ ಠಾಣೆಯ ಪಿಎಸ್ಐ ಚಂದ್ರಕಲಾ ಪತ್ತಾರ ನೇತೃತ್ವದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಅಗ್ನಿಶಾಮಕ ದಳ ಹಾಗೂ ಶಿರಸಿ ಮಾರಿಕಾಂಬಾ ಲೈಫ್ ಗಾಡ್೯ ಟೀಮ್ ಸಹಾಯದಿಂದ ಮೃತ ದೇಹವನ್ನು ಪತ್ತೆ ಹಚ್ಚಿ ಕೆರೆಯಿಂದ ಮೇಲೆತ್ತಿದ್ದಾರೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


