ಬಂಟ್ವಾಳ : ಪಡಿತರ ಚೀಟಿದಾರರಿಗೆ ವಿತರಿಸಲು ಉದ್ದೇಶಿಸಿರುವ ಆಹಾರ ಇಲಾಖೆಯ ಒಂದು ಕೋಟಿ ರೂ.ಗೂ ಅಧಿಕ ಮೌಲ್ಯದ ಸಾವಿರಾರು ಕ್ವಿಂಟಾಲ್ ಅಕ್ಕಿ ನಾಪತ್ತೆಯಾಗಿರುವ ಕುರಿತು ಕೆಎಸ್‌ಎಫ್‌ಸಿ ಅಧಿಕಾರಿಗಳ ತನಿಖೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶಿಸಿದ್ದಾರೆ. ಲೆಕ್ಕಪತ್ರ ಪರಿಶೀಲನೆ ನಡೆಸಿದಾಗ ಸುಮಾರು 1,32,36,300 ರೂಪಾಯಿ ಮೌಲ್ಯದ 3892 ಕ್ವಿಂಟಲ್ ಅಕ್ಕಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿ ಶರತ್ ಕುಮಾರ್ ಹೊಂಡಾ ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗದ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದ್ದ ಅಕ್ಕಿ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ಗೋಡೌನ್ ಮೇಲ್ವಿಚಾರಕ ವಿಜಯ್ ನನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ವಿಜಯ್ ನೀಡಿದ ಮಾಹಿತಿ ಆಧರಿಸಿ ಎಲ್ಲ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ. ಏತನ್ಮಧ್ಯೆ, ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಮತ್ತು ಅಕ್ರಮಗಳ ಬಗ್ಗೆ ಸಾರ್ವಜನಿಕರೂ ದೂರು ನೀಡುತ್ತಿದ್ದಾರೆ ಎಂದು ಹೇಳಿದರು. ಶುಕ್ರವಾರ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಎಸ್ಪಿ ಸಿ ಬಿ ರಿಷ್ಯಂತ್ ಮತ್ತಿತರ ಅಧಿಕಾರಿಗಳು ಗೋದಾಮಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಮಾತನಾಡಿ, ಗೋದಾಮಿನಲ್ಲಿ ದಾಸ್ತಾನು ಮಾಡಿರುವ ಅಕ್ಕಿಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಈ ಬಗ್ಗೆ ಕೆಎಸ್‌ಎಫ್‌ಸಿ ಗಮನಕ್ಕೆ ತರಲಾಗಿದೆ. ಗೋದಾಮಿಗೆ ಭೇಟಿ ನೀಡಿ ತನಿಖೆ ನಡೆಸುವಂತೆ ಕೆಎಸ್‌ಎಫ್‌ಸಿಯ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.


