ಬಂಟ್ವಾಳ : ಕರಿಯಂಗಳ ಗ್ರಾಮದ ಮುಂಗಾಜೆ ಎಂಬಲ್ಲಿ ಶನಿವಾರ ಬೆಳಗ್ಗೆ ಖಾಸಗಿ ಬಸ್ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ, ಬಸ್ ಕಂಡಕ್ಟರ್ ಹಾಗೂ ಓರ್ವ ಮಹಿಳಾ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಾಯಗೊಂಡವರಲ್ಲಿ ಕಾರು ಚಾಲಕ ಹೊನ್ನಯ್ಯ ಪೂಜಾರಿ, ಬಸ್ ಕಂಡಕ್ಟರ್ ಶ್ರೀಕಾಂತ್ ಮತ್ತು ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕ ಹೈದಾ ಕುಟಿನ್ಹಾ ಸೇರಿದ್ದಾರೆ. ಪ್ರಸ್ತುತ ಹೊನ್ನಯ್ಯ ಪೂಜಾರಿ ಒಳರೋಗಿಯಾಗಿ ದಾಖಲಾಗಿದ್ದು, ಉಳಿದ ಇಬ್ಬರನ್ನು ಪ್ರಥಮ ವೈದ್ಯಕೀಯ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.
ಬಿಸಿ ರೋಡ್‌ಗೆ ತೆರಳುತ್ತಿದ್ದ ಬಸ್ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಕಾರು ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದ್ದು, ಎರಡೂ ವಾಹನಗಳ ಮುಂಭಾಗಕ್ಕೆ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಬಂಟ್ವಾಳ ಟ್ರಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ.