ಪ್ಯಾರಿಸ್ : 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ. 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಮನು ಭಾಕರ್ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಿಸ್ತೂಲ್ ದೋಷದಿಂದ ಹಿನ್ನಡೆ ಅನುಭವಿಸಿದ್ದ ಶೂಟರ್ ಮನು ಭಾಕರ್ಇದೀಗ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಪದಕವೊಂದನ್ನು ಗೆದ್ದು ಸಂಭ್ರಮಿಸಿದ್ದಾರೆ. 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಫೈನಲ್ ಪಂದ್ಯದಲ್ಲಿ 221.7 ಅಂಕ ಗಳಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ. ಕೊರಿಯಾದ ಶೂಟರ್ಗಳಾದ ಓಹ್ ಯೇ ಜಿನ್(243.2), ಕಿಮ್ ಯೆಜಿ(241.3) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.
ಶನಿವಾರ ಫೈನಲ್ ಪ್ರವೇಶಿಸಿದ್ದ 22 ವರ್ಷ ವಯಸ್ಸಿನ ಮನು ಭಾಕರ್ ಮೂರನೇ ದಿನವಾದ ಭಾನುವಾರ (ಜು.28) ಅಂತಿಮ ಸುತ್ತಿನಲ್ಲಿ 3ನೇ ಸ್ಥಾನ ಪಡೆದುಕೊಂಡರು. ಈ ಮೂಲಕ ಶೂಟಿಂಗ್ನಲ್ಲಿ ಭಾರತದ ಪರ ಪದಕ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 2004ರಲ್ಲಿ ಅಥೆನ್ಸ್ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸುಮಾ ಶಿರೂರ್ ಕೊನೆಯ ಬಾರಿಗೆ ಫೈನಲ್ ತಲುಪಿದ್ದರು.ಇದೀಗ ಮನು ಭಾಕರ್ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಶೂಟಿಂಗ್ನಲ್ಲಿ ಭಾರತಕ್ಕೆ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎನ್ನುವ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದರು.


