ಪುತ್ತೂರು: ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿರುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ ವತಿಯಿಂದ ಶೌರ್ಯ ಜಾಗರಣಾ ರಥಯಾತ್ರೆ, ಬೃಹತ್ ಹಿಂದೂ ಶೌರ್ಯ ಸಂಗಮ ಅ.7 ರಂದು ಸಂಜೆ ಪುತ್ತೂರಿನ ಕಿಲ್ಲೇ ಮೈದಾನದಲ್ಲಿ ನಡೆಯಲಿದೆ ಎಂದು ಬಜರಂಗದಳ ದಕ್ಷಿಣಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ಅನೇಕ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಹಿಂದೂ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, 60ನೇ ವರ್ಷದ ಷಷ್ಟ್ಯಬ್ದಿ ಆಚರಣೆ ಅಂಗವಾಗಿ ಇದೀಗ ಬೃಹತ್ ಶೌರ್ಯ ಜಾಗರಣಾ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ನಮ್ಮ ಸನಾತನ ಧರ್ಮವನ್ನು ಈ ಪವಿತ್ರ ಭರತಭೂಮಿಯಲ್ಲಿ ಸಂರಕ್ಷಿಸುವಲ್ಲಿ ಸಾವಿರಾರು ವೀರ ಪರಾಕ್ರಮಿಗಳು ತಮ್ಮ ತ್ಯಾಗಬಲಿದಾನಗಳ ಮೂಲಕ ಹೋರಾಡಿದ್ದಾರೆ. ಸತಾನದ ಧರ್ಮವನ್ನು ಮುಂದಿನ ಪೀಳಿಗೆಗೆ ಉಳಿಸುವ ಬೆಳೆಸುವ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದ್ದು, ಹಿಂದೂಗಳನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೆ.25 ರಂದು ರಥಯಾತ್ರೆ ಚಿತ್ರದುರ್ಗದಿಂದ ಹೊರಟಿದ್ದು, ಅ.7 ರಂದು ಬೆಳಿಗ್ಗೆ ರಥಯಾತ್ರೆ ಸುಬ್ರಹ್ಮಣ್ಯ, ಕಡಬ, ಉಪ್ಪಿನಂಗಡಿ ಮೂಲಕ ಪುತ್ತೂರಿಗೆ ಸಂಜೆ ಆಗಮಿಸಲಿದೆ. ಈ ಯಾತ್ರೆಯನ್ನು ವಿವಿಧ ಕಡೆಗಳಲ್ಲಿ ಸ್ವಾಗತಿಸಲಾಗುವುದು.
ಹಾಗೆಯೇ ಪುತ್ತೂರಿನಲ್ಲಿ ಪುಷ್ಪಾರ್ಚನೆ ಮೂಲಕ ಸ್ವಾಗತಿಸಲಾಗುವುದು. ಇದರ ಅಂಗವಾಗಿ ಸಂಜೆ 4.30 ಕ್ಕೆ ಬೃಹತ್ ಶೋಭಾಯಾತ್ರೆಗೆ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಚಾಲನೆ ನೀಡಲಾಗುವುದು. ಬಳಿಕ ಮುಖ್ಯರಸ್ತೆಯಾಗಿ ರಥಯಾತ್ರೆ ಚೆಂಡೆ, ಶಂಕನಾದದ ಜತೆಗೆ ಯುವಕರು ಹಲವಾರು ವೀರ ಪರಾಕ್ರಮಿಗಳ ವೇಷವನ್ನು ಧರಿಸಿ ಜತೆಗೂಡಿ ಸಾಗಿಬಂದು ಕಿಲ್ಲೆ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಬಳಿಕ ಸಂಜೆ 5.30 ಕ್ಕೆ ನಡೆಯುವ ಬೃಹತ್ ಹಿಂದೂ ಶೌರ್ಯ ಸಂಗಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ್ ಸು.ರಾಮಣ್ಣ ದಿಕ್ಸೂಚಿ ಭಾಷಣ ಮಾಡುವರು. ವಿಹಿಂಪ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ ಅಧ್ಯಕ್ಷತೆ ವಹಿಸುವರು. ಬಜರಂಗಳದ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ, ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಸಂಚಾಲಕ ಕೃಷ್ಣಪ್ರಸಾದ್ ಬೆಟ್ಟ, ವಿಹಿಂಪ ಜಿಲ್ಲಾ ಸಹಸಂಚಾಲಕ ಶ್ರೀಧರ್ ತೆಂಕಿಲ ಉಪಸ್ಥಿತರಿದ್ದರು.


