ಪುತ್ತೂರು: ರಾಜ್ಯ ಸರಕಾರ ೧ ಸಾವಿರ ಮದ್ಯಂಗಡಿ ತೆರೆಯುವ ಮೂಲಕ ಗಾಂಧಿ ತತ್ವಕ್ಕೆ ವಿರೋಧವಾಗಿ ನಡೆಯುತ್ತಿದೆ ಮತ್ತು ಮದ್ಯದಂಗಡಿ ಹೆಚ್ಚಿಸಿ ಗಾಂಧಿ ಜಯಂತಿ ಆಚರಿಸುತ್ತಿದೆ ಎಂದು ಆರೋಪಿಸಿ ಎಸ್ ಡಿ ಪಿ ಐ ಪುತ್ತೂರು ಕ್ಷೇತ್ರ ಸಮಿತಿಯಿಂದ ಅ.೨ ರಂದು ಪುತ್ತೂರು ತಾಲೂಕು ಆಡಳಿತ ಸೌಧ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.
ಉಮೆನ್ಸ್ ಇಂಡಿಯಾ ಮೂವುಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಶ್ರೀಯಾ ಬೆಳ್ಳಾರೆ ಅವರು ಮಾತನಾಡಿ ರಾಜ್ಯ ಸರಕಾರ ಗ್ಯಾರೆಂಟಿ ಸರಿದೂಗಿಸಲು ಮದ್ಯಪಾನ ಹೆಚ್ಚಿಸುತ್ತಿದೆ. ಇವರಿಗೆ ಗಾಂಧಿ ಜಯಂತಿ ಆಚರಣೆ ಮಾಡಲು ನೈತಿಕ ಹಕ್ಕಿಲ್ಲ. ದೇಶದಲ್ಲೇ ಅತಿ ಹೆಚ್ಚು ಮದ್ಯ ಮಾರಾಟ ಆಗುತ್ತಿರುವ ಕರ್ನಾಟಕದಲ್ಲಿ ಇದೀಗ ಸಿದ್ದರಾಮಯ್ಯ ಸರಕಾರ ಮತ್ತೆ ಗ್ರಾಮ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಯೋಜನೆ ಹಾಕಿದೆ.
ಇದನ್ನು ಪ್ರಶ್ನಿಸಿದರೆ ಜನಸಂಖ್ಯೆಗೆ ಆಧಾರವಾಗಿ ಮದ್ಯದಂಗಡಿ ತೆರೆಯುವುದೆಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಅಗತ್ಯ ಇರುವುದು ಮದ್ಯದಂಗಡಿಯಲ್ಲ. ಶಾಲಾ ಕಾಲೇಜು, ಸರಕಾರಿ ಆಸ್ಪತ್ರೆಯನ್ನು ತೆರೆಯುವ ಮೂಲಕ ಸಮಾಜದ ಸ್ವಾಸ್ತö್ಯ ಕಾಪಾಡಬೇಕು ಎಂದ ಅವರು ಚುನಾವಣೆಗೆ ಮುಂದೆ ೨ಬಿ ಮೀಸಲಾತಿ, ಬಜರಂಗದಳ ನಿಷೇಧವನ್ನು ಇನ್ನೂ ಮಾಡಲು ಮುಂದಾಗಿಲ್ಲ. ಹೆಚ್ಚುವರಿ ಮದ್ಯದಂಗಡಿ ತೆರೆಯುವುದನ್ನು ಬಿಟ್ಟು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಿ ಎಂದು ಆಗ್ರಹಿಸಿದರು.
ರಿಯಾಜ್ ಬಳಕ್ಕ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಎಸ್ಡಿಪಿಐ ಪುತ್ತೂರು ವಿಧಾನಸಭಾ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್,ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಉಮೆನ್ಸ್ ಇಂಡಿಯಾ ಮೂಮೆಂಟ್ ಪುತ್ತೂರು ಅಧ್ಯಕ್ಷ ಜಾಯಿದಾ ಸಾಗರ್, ನಗರಸಭಾ ಸದಸ್ಯೆ ಪಾತಿಮಾತ್ ಜೋರಾ, ಉಪ್ಪಿನಂಗಡಿ ಗ್ರಾ.ಪಂ ಸದಸ್ಯೆ ಸೌದ, ಎಸ್ಡಿಪಿಐ ಸಂಘಟನಾ ಕಾರ್ಯದರ್ಶಿ ಅಶ್ರಫ್ ಬಾವು, ಹಿರಿಯರಾದ ಪಿಬಿಕೆ, ಉಸ್ಮಾನ್ ಎ.ಕೆ. ಸಲೀಂ ಪುರುಷರಕಟ್ಟೆ, ಅಶ್ರಫ್ ಬಡಕ್ಕೋಡಿ, ನವಾಜ್ ಕೆರೆಮೂಲೆ, ಎಸ್ಡಿಟಿಯು ಕಾರ್ಯದರ್ಶಿ ಇಫಾಜ್ ಬನ್ನೂರು,ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ರಹೀಮ್ ಪುತ್ತೂರು ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


