ಪುತ್ತೂರು :ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಜಂಕ್ಷನ್ ಬಳಿ ಚರಂಡಿ ಅವ್ಯವಸ್ಥೆಯಿಂದಾಗಿ ಕೊಳಕು ವಾತಾವರಣ ಸೃಷ್ಠಿಯಾಗಿದ್ದು, ಇಲ್ಲಿಂದ ಬೀರುವ ದುರ್ನಾತ ಪರಿಸರದ ಮಂದಿಯ ನೆಮ್ಮದಿ ಕಡೆಸುತ್ತಿದೆ. ರಿಕ್ಷಾ ತಂಗುದಾಣದ ಪಕ್ಕದಲ್ಲೇ ಕೊಳಕು-ಮಲೀನ ನೀರು ಹರಿದುಹೋಗುತ್ತಿರುವುದರಿಂದ ಸಂಜೆಯ ವೇಳೆ ಸೊಳ್ಳೆ ಕಾಟ ಅತಿಯಾಗುತ್ತಿದ್ದು, ಸೊಳ್ಳೆ ಓಡಿಸುವುದೇ ಅಲ್ಲಿನ ರಿಕ್ಷಾ ಚಾಲಕರಿಗೊಂದು ಕೆಲಸವಾಗಿಬಿಟ್ಟಿದೆ.
ಸ್ವಚ್ಚ ಪರಿಸರ, ಸ್ವಚ್ಚ ಭಾರತ ಘೋಷಣೆಗಳು ಮೊಳಗುತ್ತಿರುವ ಮತ್ತು ಈ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿರುವ ನಡುವೆಯೇ ಸುಬ್ರಹ್ಮಣ್ಯ -ಮಂಜೇಶ್ವರ ಮುಖ್ಯ ರಸ್ತೆಯ ಬದಿಯಲ್ಲಿ, ಶಾಂತಿಗೋಡು-ಆನಡ್ಕ ರಸ್ತೆ ಸಂಪರ್ಕ ಭಾಗವಾದ ಪುರುಷರಕಟ್ಟೆ ಜಂಕ್ಷನ್ ಬಳಿ ಕೊಳಕು ಪರಿಸರ ನಿರ್ಮಾಣವಾಗಿದೆ. ಸ್ಥಳೀಯ ಆಡಳಿತ ವ್ಯವಸ್ಥೆಯ ನಿರ್ಲಕ್ಷö್ಯದಿಂದಾಗಿ ಇಂತಹ ಅವ್ಯವಸ್ಥೆ ಆಗಿದೆ ಎಂಬ ಆರೋಪ ವ್ಯಕ್ತವಾಗಿರುವುದು ಇಲ್ಲಿನ ಆಡಳಿತ ವ್ಯವಸ್ಥೆಗೊಂದು ಕಪ್ಪು ಚುಕ್ಕಿಯಾಗಿದೆ.
ಪುರುಷರ ಕಟ್ಟೆ ಜಂಕ್ಷನ್ ಬಳಿ ಬಿಎಂಎಸ್ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಪುರುಷರಕಟ್ಟೆ ಘಟಕದ ರಿಕ್ಷಾ ನಿಲ್ದಾಣವಿದೆ. ಇದರ ಪಕ್ಕದಲ್ಲೇ ಪ್ರಯಾಣಿಕರ ಬಸ್ ತಂಗುದಾಣವಿದೆ. ಇದರ ಬದಿಯಲ್ಲೇ ದುರ್ವಾಸನೆ ಬೀರುವ ಕೊಳಕು ನೀರು ಹರಿದು ಹೋಗುತ್ತಿದೆ. ಈ ರಿಕ್ಷಾ ನಿಲ್ದಾಣದಲ್ಲಿ 25 ರಷ್ಟು ಅಟೋ ರಿಕ್ಷಾ ರಿಕ್ಷಾ ಚಾಲಕರು ತಮ್ಮ ರಿಕ್ಷಾಗಳನ್ನು ನಿಲುಗಡೆ ಮಾಡಿ ಸರದಿ ಸಾಲಿನಲ್ಲಿ ಕಾದು ಬಾಡಿಗೆ ಮಾಡುತ್ತಿದ್ದು, ಇಲ್ಲಿನ ಮಲೀನ ವ್ಯವಸ್ಥೆಯಿಂದಾಗಿ ರಿಕ್ಷಾ ಚಾಲಕರು ದಿನವಿಡೀ ಮೂಗುಮುಚ್ಚಿಕೊಂಡು ಕುಳಿತುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಇದೆ. ಇಲ್ಲಿಗೆ ದಿನನಿತ್ಯ ಬರುವ ರಿಕ್ಷಾ ಪ್ರಯಾಣಿಕರಿಗೆ ಹಾಗೂ ಪ್ರಯಾಣಿಕರ ಬಸ್ ತಂಗುದಾಣದಲ್ಲಿ ವಾಹನಕ್ಕಾಗಿ ಕಾಯುವ ಮಂದಿಗೂ ಇದೇ ಸ್ಥಿತಿ.
ಶಾಂತಿಗೋಡು ಆನಡ್ಕ ರಸ್ತೆ ಭಾಗದಿಂದ ಒಳಚರಂಡಿ ವ್ಯವಸ್ಥೆಯ ಮೂಲಕ ಹರಿದು ಬರುತ್ತಿರುವ ಕೊಳಕು ನೀರು ರಿಕ್ಷಾ ತಂದುದಾಣದ ಬದಿಯ ಓಪನ್ ಚರಂಡಿಯಲ್ಲಿ ಹರಿದು ಹೋಗುತ್ತಿದೆ. ಇನ್ನೊಂದು ಬದಿಯಲ್ಲಿ ಕೊಳಕು ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ ಮಧ್ಯ ಭಾಗದಲ್ಲಿ ಕೊಳಕು ನೀರು ಹರಿವಿಗೆ ಸಮರ್ಪಕ ವ್ಯವಸ್ಥೆ ಮಾಡಲಾಗಿಲ್ಲ. ಈ ಭಾಗದಲ್ಲಿ ಕೊಳಕು ನೀರು ದುರ್ನಾತ ಬೀರುವ ಮೂಲಕ ಸಮಸ್ಯೆ ಸೃಷ್ಠಿಗೆ ಹಾಗೂ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಇದೆ. ಮಳೆಗಾಲದಲ್ಲಿ ಮಳೆನೀರು ಹರಿದು ಹೋಗುತ್ತಿರುವುದರಿಂದ ಅಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಮಳೆ ನಿಂತ ಬಳಿಕ ಇಲ್ಲಿನ ಸಮಸ್ಯೆ ಹೇಳತೀರದು. ನಾವು ಮೂಗು ಮುಚ್ಚಿಕೊಂಡೇ ಇಲ್ಲಿ ದಿನ ಕಳೆಯ ಬೇಕಾಗಿದೆ. ರಿಕ್ಷಾ ನಿಲ್ದಾಣಕ್ಕೆ ಬರುವ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಪ್ರಯಾಣಿಕರು ನರಕಯಾತನೆ ಅನುಭವಿಸಬೇಕಾಗಿ ಬಂದಿದೆ. ಕಳೆದ ನವಂಬರ್ ತಿಂಗಳಿನಲ್ಲಿಯೇ ನಾವು ನರಿಮೊಗರು ಗ್ರಾಮ ಪಂಚಾಯಿತಿಗೆ ಕೊಳಕು ನೀರಿನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿಕೊಂಡಿದ್ದೆವು. ಆದರೆ ಈ ತನಕವೂ ಗ್ರಾಮ ಪಂಚಾಯಿತಿ ವತಿಯಿಂದ ಸ್ಪಂದನೆ ಸಿಕ್ಕಿಲ್ಲ. ಪರಿಶೀಲಿಸಿ ಹೋಗಿರುವುದು ಬಿಟ್ಟರೆ ಬೇರೇನೂ ಮಾಡಿಲ್ಲ.ಕನಿಷ್ಠ ಬ್ಲೀಚಿಂಗ್ ಪೌಡರ್ ತಂದು ಹಾಕುವ ಕೆಲಸವನ್ನೂ ಮಾಡಿಲ್ಲ ಎಂಬುವುದು ಅಲ್ಲಿನ ರಿಕ್ಷಾ ಚಾಲಕರ ಮತ್ತು ಸಾರ್ವಜನಿಕರ ವೇದನೆಯ ಮಾತು.
ಸೊಳ್ಳೆ ಓಡಿಸುವುದೇ ರಿಕ್ಷಾ ಚಾಲಕರ ಕೆಲಸ…..
ದುರ್ನಾತ ಬೀರುವ ಕೊಳಚೆ ನೀರಿನಿಂದಾಗಿ ಈ ಭಾಗ ಸೊಳ್ಳೆ ಉತ್ಪಾದನಾ ಕೇಂದ್ರವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಸಂಜೆಯ ವೇಳೆ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ರಿಕ್ಷಾ ತಂಗುದಾಣದಲ್ಲಿ ಮತ್ತು ಈ ವಠಾರದಲ್ಲಿ ನಿಂತುಕೊಳ್ಳಲು ಕೂಡ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಚರಂಡಿ ಸ್ವಚ್ಚ ಗೊಳಿಸುವುದು ಮತ್ತು ದಿನನಿತ್ಯ ಸಂಜೆ ವೇಳೆ ಕಸಕಡ್ಡಿ,ವೇಸ್ಟ್ ಪೇಪರ್ ಬಳಸಿಕೊಂಡು ಚರಂಡಿ ಬದಿಯಲ್ಲಿ ಬೆಂಕಿ ಹಾಕಿ ಸೊಳ್ಳೆ ಓಡಿಸುವುದೇ ನಮಗೊಂದು ಕೆಲಸವಾಗಿ ಬಿಟ್ಟಿದೆ. ನಮ್ಮ ನೋವನ್ನು ಯಾರಲ್ಲಿ ಹೇಳಿಕೊಳ್ಳಲಿ. ಈ ಸಮಸ್ಯೆಗೆ ಪರಿಹಾರವಿಲ್ಲವೇ ಎನ್ನುವುದು ರಿಕ್ಷಾ ಚಾಲಕರ ಪ್ರಶ್ನೆ.
ರಿಕ್ಷಾ ಚಾಲಕ ಸಂಘದ ಮನವಿ
ಪುರುಷರಕಟ್ಟೆಯಲ್ಲಿರುವ ರಿಕ್ಷಾ ತಂಗುದಾಣದ ಬಳಿ ಕೊಳಚೆನೀರು ಶೇಖರಣೆಯಾಗುತ್ತಿದ್ದು, ಇದರಿಂದಾಗಿ ಇಡೀ ಪರಿಸರವೇ ದುರ್ನಾತದಿಂದ ಕೂಡಿದೆ.ಗ್ರಾಮ ಪಂಚಾಯಿತಿ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಪುರುಷರಕಟ್ಟೆ ಘಟಕದ ವತಿಯಿಂದ ಅಲ್ಲಿನ ರಿಕ್ಷಾ ಚಾಲಕರು ಸಹಿ ಮಾಡಿ ಕಳೆದ ನ.೧೭ರಂದು ನರಿಮಗರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಈ ತನಕ ಸ್ಪಂದನೆ ನೀಡಿಲ್ಲ ಎಂದು ಇದೀಗ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ
.


