ಪುತ್ತೂರು : ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆಗಾಗಿ ದೇಶದ ವಿವಿದ ರಾಜ್ಯಗಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಇದಕ್ಕೆ ಸಜ್ಜುಗೊಳಿಸಲು ಈಗಾಗಲೇ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶ ಕರ್ನಾಟಕದಲ್ಲಿ ಪ್ರಥಮವಾಗಿ ಮಂಗಳೂರನ್ನು ಆಯ್ಕೆ ಮಾಡಿಕೊಂಡು ಫೆ.17ರಂದು ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಕಾಲೇಜಿನ ಮುಂಭಾಗದ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಪ್ರಚಾರ ಮಾದ್ಯಮ ಮುಖ್ಯಸ್ಥ ಕೆಪಿಸಿಯ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಸಹಭಾಗಿತ್ವದಲ್ಲಿ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಸಹಕಾರದಿಂದ ಈ ಕಾರ್ಯಕ್ರಮ ನಡೆಯಲಿದೆ. ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲಾ ಹಂತದ ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಫೆ.17 ರಂದು ಅಪರಾಹ್ನ 2.00ಗಂಟೆಯಿಂದ ಪ್ರಾರಂಭಗೊಳ್ಳುವ ಸಮಾವೇಶದಲ್ಲಿ ಭಾಗವಹಿವ ಮೂಲಕ ತಮ್ಮ ಸಂಘಟನಾ ಶಕ್ತಿಯನ್ನು ವಿರೋಧ ಪಕ್ಷದವರಿಗೆ ತೋರಿಸುವ ನಿಟ್ಟಿನಲ್ಲಿ ಮತ್ತು ಸರಕಾರದ ಕಾರ್ಯಕ್ರಮವನ್ನು ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ಈ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೆಪಿಸಿಸಿಯಿಂದ ಬೇರೆ ಬೇರೆ ವೀಕ್ಷಕರನ್ನು ಪ್ರತಿಯೊಂದು ತಾಲೂಕು ಮಟ್ಟಕ್ಕೂ ನೇಮಕ ಮಾಡಲಾಗಿದೆ. ಅದೇ ರೀತಿ ಉಸ್ತುವಾರಿಗಳನ್ನು ಪ್ರತಿಯೊಂದು ಬ್ಲಾಕ್‌ಗೆ ನೇಮಿಸಲಾಗಿದೆ ಎಂದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಕ್ತ ಶಾಸಕ ಯು.ಟಿ.ಖಾದರ್ ಅವರು ಸ್ಪೀಕರ್ ಆಗಿದ್ದಾರೆ. ಶಾಸಕರಾಗಿ ಆಡಳಿತರೂಢರಾಗಿರುವವರು ಅಶೋಕ್ ಕುಮಾರ್ ರೈ ಹಾಗಾಗಿ ಪುತ್ತೂರಿನಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸುವ ಯೋಜನೆ ಹಾಕಿಕೊಂಡು ಅದಕ್ಕಾಗಿ ಶಾಸಕರ ನೇತೃತ್ವದಲ್ಲಿ ಮೂರು ವಿಶೇಷ ಸಭೆ ನಡೆಸಲಾಗಿದೆ. ಹಾಗಾಗಿ ದಕ್ಷಿಣ ಕನ್ನಡದಿಂದ ಅತೀ ಹೆಚ್ಚು ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಪುತ್ತೂರಿನಿಂದ 10ಸಾವಿರ ಮಂದಿಯ ನಿರೀಕ್ಷೆ ಇದೆ. ಇದಕ್ಕೆ ಬೇಕಾದ ವ್ಯವಸ್ಥೆ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ಯಾರೆಂಟಿ ಯೋಜನೆಯ ಫಲಾನುಭವಿಗಳೆ ಜಾಸ್ತಿ ಇದ್ದಾರೆ. ಹಾಗಾಗಿ ಇಡಿ ಜಿಲ್ಲೆಯಲ್ಲಿ ನಮಗೆ ಬೇಕಾದ ಹಾಗೆ ವ್ಯವಸ್ಥೆ ಮಾಡುವ ಶಾಸಕರು ಅಶೋಕ್ ರೈ ಮಾತ್ರ. ಹಾಗಾಗಿ ಪುತ್ತೂರಿನಿಂದ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಾವು ಹೇಮನಾಥ ಶೆಟ್ಟಿ ಹೇಳಿದರು.
ಬೆಳ್ತಂಗಡಿ, ಬೈಂದೂರು ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿರುವ ಎಮ್ ಎಸ್ ಮೊಹಮ್ಮದ್ ಅವರು ಮಾತನಾಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸುಮಾರು 35 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದಿಂದ ಸಂಸದರಾಗುವ ಅವಕಾಶ ಸಿಗಲಿಲ್ಲ. ಈ ಸಲದ ಚುನಾವಣೆಯಲ್ಲಿ ನಾವು ಪ್ರಬಲ ಪೈಪೋಟಿ ಕೊಡುವ ನಿಟ್ಟಿನಲ್ಲಿ ಮತ್ತು ಯಾವುದೇ ರೀತಿ ಹೋರಾಟ ಮಾಡಿಯಾದರೂ ಚುನಾವಣೆಯಲ್ಲಿ ಪಕ್ಷ ಗೆಲ್ಲುವ ಗುರಿಯನ್ನು ಇಟ್ಟುಕೊಂಡು ಪಕ್ಷದ ಕಾರ್ಯಕರ್ತರು, ನಾಯಕರು ಒಂದಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸಮಾವೇಶ ನಡೆಯಲಿದೆ. 10ಸಾವಿರ ಸಂಖ್ಯೆಗೆ ಕಡಿಮೆಯಾಗದಂತೆ ಪುತ್ತೂರಿನಿಂದ ಕಾರ್ಯಕರ್ತರು ಸಮಾವೇಶಕ್ಕೆ ತೆರಳಲಿದ್ದಾರೆ ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸರಕಾರ ಕೊಟ್ಟ ಅನುದಾನ ಖರ್ಚು ಮಾಡಿರುವುದನ್ನು ಬಿಂಬಿಸುವುದು ದೊಡ್ಡ ಸಾಧನೆಯಲ್ಲ. ರೂ.5ಕೋಟಿಯನ್ನೇ ಖರ್ಚು ಮಾಡಿದ್ದನ್ನು ದೊಡ್ಡ ಸಾಧನೆ ಮಾಡಿದ್ದು ಹೇಳುವುದು ಜನಪ್ರತಿನಿಧಿಯ ಸಾಧನೆಯಲ್ಲ. ರೂ. 5 ಕೋಟಿಯಲ್ಲದೆ ಕೇಂದ್ರ ಸರಕಾರದ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಎಷ್ಟು ತಂದಿದ್ದಾರೆ. ಏನು ಮಾಡಿದ್ದಾರೆ ಎಂಬುದನ್ನು ಚರ್ಚೆ ಮಾಡಬೇಕಾದ ವಿಚಾರ. ನಾನೊಬ್ಬ ಜಿ.ಪಂ ಸದಸ್ಯನಾಗಿ ಪ್ರತಿಸಲ ಅನುದಾನ ತಂದು ನಾನು ಹಾಗೆ ಮಾಡಿದ್ದೇನೆ ಹೀಗೆ ಮಾಡಿದ್ದೇನೆ ಎಂದು ಹೇಳುವುದು ದೊಡ್ಡ ಸಾಧನೆಯಲ್ಲ. ಆ ಅನುದಾನ ಎಲ್ಲರಿಗೂ ಒಂದೇ. ನಮಗೆ ಸಿಗುವ ಅನುದಾನಕ್ಕಿಂತ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡುವುದು ಪ್ರಮುಖ ವಿಚಾರ. ಇದೆಲ್ಲವನ್ನು ನಾವು ಜನರ ಮುಂದಿಟ್ಟು ಮುಂದಿನ ದಿನ ಚುನಾವಣೆ ಕೆಲಸ ಮಾಡಲಿದ್ದೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಮಾವೇಶದ ಸುಳ್ಯ ಬ್ಲಾಕ್ ಕಾಂಗ್ರೆಸ್ ವೀಕ್ಷಕ ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವೀಕ್ಷಕ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ನಗರಸಭೆ ಸದಸ್ಯ ರಾಬಿನ್ ತಾವೋ ಉಪಸ್ಥಿತರಿದ್ದರು.