ಪುತ್ತೂರು: ಕರ್ನಾಟಕ ರಾಜ್ಯವೆಂದು ಮರು ನಾಮಕರಣವಾದ ೫೦ ನೇ ವರ್ಷದ ಸುವರ್ಣ ಸಂಭ್ರಮ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಧ್ಯೇಯ ವಾಕ್ಯದೊಂದಿಗೆ ದರ್ಬೆ ವೃತ್ತದಿಂದ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆಯೊಂದಿಗೆ ವೈಭವದಿಂದ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಅವರು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಇದೆ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠ 0ದೂರ್ ಉಪಸ್ಥಿತರಿದ್ದರು.
ಮೆರವಣಿಗೆಯು ಮುಖ್ಯರಸ್ತೆಯಾಗಿ ಕೋರ್ಟ್ ರಸ್ತೆ ಮೂಲಕ ನಗರ ಸಭೆಯ ಮುಂಭಾಗದ ಪುರಭವನದಲ್ಲಿ ತಾಲೂಕು ಆಡಳಿತದಿಂದ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಯಿತು.
ಕಿಲ್ಲೆ ಮೈದಾನದಲ್ಲಿರುವ ಮಂಗಲ್ ಪಾಂಡೆ ಚೌಕದಲ್ಲಿ ಸಹಾಯಕ ಕಮೀಷನರ್ ಗಿರೀಶ್ ನಂದನ್ ರಾಷ್ಡ್ರಧ್ವಜಾರೋಹಣ ಮಾಡಿದರು.
ಪುರಭವನದ ಮುಂದೆ ಶಾಸಕ ಅಶೋಕ್ ಕುಮಾರ್ ರೈ ಅವರು ಕನ್ನಡ ಧ್ವಜಾರೋಹಣ ಮಾಡಿದರು. ಬಳಿಕ ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಕನ್ನಡ ಭುವನೇಶ್ವರಿ ದೇವಿಯ ಪ್ರತಿಮೆ ಮುಂದೆ ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆ ಮಾಡಿದರು.
ಕರ್ನಾಟಕ ಸುವರ್ಣ ಸಂಭ್ರದ ಹಿನ್ನಲೆಯಲ್ಲಿ ೧೦ ಮಂದಿ ಸಾಧಕರಾದ ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯ ಪ್ರಸೂತಿ ತಜ್ಞ ಡಾ.ಸುಬ್ರಾಯ ಭಟ್, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಎ.ಪಿ ಸದಾಶಿವ ಮರಿಕೆ, ಸಾಹಿತ್ಯ ಕ್ಷೇತ್ರದಲ್ಲಿ ನಿರ್ಮಲಾ ಸುರತ್ಕಲ್, ಶಿಕ್ಷಣ ಕ್ಷೇತ್ರದಲ್ಲಿ ನಿವೃತ್ತ ಶಿಕ್ಷಕ ನಾರಾಯಣ ಕೆ, ಕ್ರೀಡಾ ಕ್ಷೇತ್ರದಲ್ಲಿ ದಯಾನಂದ ರೈ ಕೋರ್ಮಂಡ, ರಂಗಭೂಮಿಯಲ್ಲಿ ಸುಂದರ ರೈ ಮಂದಾರ, ಶಿಕ್ಷಣ ಸಮನ್ವಯದಲ್ಲಿ ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವಿನ್, ಸಮಾಜ ಸೇವೆಯಲ್ಲಿ ಸರಕಾರಿ ಆಸ್ಪತ್ರೆಯ ಡಾ.ಅಜಯ್, ಸಾಹಿತ್ಯ ಸಂಘಟನೆಯಲ್ಲಿ ನಾರಾಯಣ ಕುಂಬ್ರ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ರೂರು ತಾಲೂಕು ಅಧ್ಯಕ್ಷ ಸಿದ್ದಿಕ್ ನಿರಾಜೆ ಅವರನ್ನು ತಾಲೂಕು ರಾಷ್ಡ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶಾಸಕರ ಮೂಲಕ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಕನ್ನಡ ನಮ್ಮ ಇತಿಹಾಸ ಮೌಲ್ಯದ ಭಂಡಾರವಾಗಿದೆ. ಕನ್ನಡಕ್ಕಾಗಿ ಪೂರ್ವಜರ ಕೊಡುಗೆಗಳನ್ನು ರಾಜ್ಯೋತ್ಸವದಂದು ನೆನಪಿಸುವುದು ಅಗತ್ಯ. ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಅರಿವು, ಪ್ರೀತಿಯನ್ನು ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕನ್ನಡದ ಬಗ್ಗೆ ಅತೀವಾ ಪೂರಕ ಕಾರ್ಯಕ್ರಮ ಸರಕಾರ ಹಮ್ಮಿಕೊಂಡಿದೆ ಎಂದರು.
ಇದೆ ಸಂದರ್ಭದಲ್ಲಿ ಸುವರ್ಣ ಕನ್ನಡ ಸಂಭ್ರದ ಹಿನ್ನಲೆಯಲ್ಲಿ ೫ ಕನ್ನಡ ಹಾಡುಗಳನ್ನು ಸಂಗೀತ ಶಿಕ್ಷಕರು ಹಾಡಿದರು. ಸಹಾಯಕ ಕಮೀಷನರ್ ಗಿರೀಶ್ ನಂದನ್,ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಜೆ ಶಿವಶಂಕರ್, ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಚಾಲಕರಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್,ಪೌರಾಯುಕ್ತ ಮಧು ಎಸ್ ಮನೋಹರ್,ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


