ಪುಣೆ : ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾರತದಲ್ಲಿ ಸರ್ವಧರ್ಮ ಸಾಮರಸ್ಯ ಕಾಪಾಡುವಂತೆ ಕೇಳಿಕೊಂಡಿದ್ದು, ರಾಮ ಮಂದಿರದಂತೆ ವಿವಾದವನ್ನು ಎಲ್ಲೂ ಸೃಷ್ಟಿಸಬೇಡಿ ಎಂದು ಹೇಳಿದ್ದಾರೆ ಮತ್ತು ಧಾರ್ಮಿಕ ಸ್ಥಳಗಳ ಹೆಚ್ಚುತ್ತಿರುವ ವಿವಾದಗಳ ಬಗ್ಗೆ ಟೀಕಿಸಿದ್ದಾರೆ.
ವಿವಿಧ ಸ್ಥಳಗಳಲ್ಲಿ ರಾಮಮಂದಿರ ದಂತಹ ವಿವಾದಗಳನ್ನು ಹುಟ್ಟುಹಾಕುವುದು ಸ್ವೀಕಾರಾರ್ಹವಲ್ಲ. ವಿಭಿನ್ನ ನಂಬಿಕೆಗಳು ಮತ್ತು ಸಿದ್ಧಾಂತಗಳಿದ್ದರೂ ಹೇಗೆ ಸಾಮರಸ್ಯದಿಂದ ಬದುಕಬಹುದು ಎಂಬುದಕ್ಕೆ ಭಾರತವು ಒಂದು
ಉದಾಹರಣೆಯಾಗಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಪುಣೆಯಲ್ಲಿ “ವಿಶ್ವಗುರು ಭಾರತ” ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಭಾರತೀಯರು ಹಿಂದಿನ ತಪ್ಪು ಗಳಿಂದ ಕಲಿಯಬೇಕು ಮತ್ತು ವಿವಾದವನ್ನು ತಪ್ಪಿಸುವ
ಮೂಲಕ ತಮ್ಮ ದೇಶವನ್ನು ಜಗತ್ತಿಗೆ ಮಾದರಿಯನ್ನಾಗಿ ಮಾಡಲು ಶ್ರಮಿಸಬೇಕು. ರಾಮ ಮಂದಿರವು ನಂಬಿಕೆಯ ವಿಷಯವಾಗಿದೆ ಮತ್ತು ಹಿಂದೂಗಳು ಅದನ್ನು ನಿರ್ಮಿಸಬೇಕು ಎಂದು ಬಯಸಿದ್ದರು. ದ್ವೇಷದಿಂದ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಹೊಸದಾಗಿ ವಿವಾದವು ಭುಗಿಲೆದ್ದಿರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಸಮಾಜದಲ್ಲಿನ ಘರ್ಷಣೆಯನ್ನು ಕಡಿಮೆ ಮಾಡಲು ಪ್ರಾಚೀನ ಸಂಸ್ಕೃತಿಗೆ ಮರಳುವುದು ಪರಿಹಾರವಾಗಿದೆ. ಉಗ್ರವಾದ, ಆಕ್ರಮಣಶೀಲತೆ, ಬಲವಂತಿಕೆ ಮತ್ತು ಇತರರ ದೇವರುಗಳನ್ನು ಅವಮಾನಿಸುವುದು ನಮ್ಮ ಸಂಸ್ಕೃತಿಯಲ್ಲ ಎಂದು ಹೇಳಿದ್ದಾರೆ.