ಪಾಟ್ನಾ : ಬಿಹಾರ ವಿಧಾನ ಸಭಾ ಚುನಾವಣಾ ಫಲಿತಾಂಶ ಘೋಷಣೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಆದರೆ ಈಗಾಗಲೇ ಭಾರಿ ಅಂತರದಲ್ಲಿ ಮುನ್ನಡೆ ಸಾಧಿಸಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA)ದ ಜೆಡಿಯು(JDU) ಸಂಭ್ರಮಾಚರಣೆಗೆ ಸಿದ್ಧತೆ ನಡೆಸುತ್ತಿದೆ.
ಈ ನಡುವೆ ಇನ್ನು ಕೆಲವು ಗಂಟೆಗಳಲ್ಲಿ ಉತ್ತಮ ಆಡಳಿತ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು ತಂದುಕೊಡಲು ಈ ಐದು ಅಂಶಗಳು ಪ್ರಮುಖ ಕಾರಣವಾಗಿವೆ.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಚಾಲ್ತಿಯಲ್ಲಿದೆ. ಆಡಳಿತಾರೂಢ ಎನ್ಡಿಎ ಮತ್ತು ವಿಪಕ್ಷಗಳ ಮಹಾಘಟಬಂಧನ್ ನಡುವೆ ಪೈಪೋಟಿ ಏರ್ಪಟ್ಟಿದೆ. ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ಎರಡೂ ಮೈತ್ರಿಕೂಟಗಳು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ. ಚುನಾವಣೋತ್ತರ ಸಮೀಕ್ಷೆಗಳು ಎನ್ಡಿಎಗೆ ಸ್ಪಷ್ಟ ಬಹುಮತವನ್ನು ಭವಿಷ್ಯ ನುಡಿದಿದ್ದು, ಆರಂಭಿಕ ಟ್ರೆಂಡ್ಗಳೂ ಇದನ್ನೇ ಹೇಳುತ್ತಿತ್ತು ಆದರೆ ಎನ್.ಡಿ.ಎ ಅದಕ್ಕಿಂತ ಹೆಚ್ಚು ಸಾಧನೆ ಮಾಡಿದೆ.
ವಿಧಾನಸಭಾ ಕ್ಷೇತ್ರಗಳ ಭವಿಷ್ಯ ಇನ್ನೇನು ಕೆಲವೇ ಕ್ಷಣಗಳಲ್ಲಿ ನಿರ್ಧಾರವಾಗಲಿದೆ. ಮತ ಎಣಿಕೆ ಚಾಲ್ತಿಯಲ್ಲಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳುವ ತವಕದಲ್ಲಿದ್ದರೆ, ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಪ್ರಬಲ ಪೈಪೋಟಿ ನೀಡಿದೆ. ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ‘ಜನ್ ಸುರಾಜ್’ ಪಕ್ಷದ ಪ್ರವೇಶವು ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಎನ್ಡಿಎ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇರುವುದರಿಂದ, ಪಾಟ್ನಾದಲ್ಲಿ ಬಿಹಾರ ಎಂದರೆ ನಿತೀಶ್ ಕುಮಾರ್ ಎಂದು ಬರೆದಿರುವ ಪೋಸ್ಟರ್ಗಳನ್ನು ಹಾಕಲಾಗಿದೆ. ಚುನಾವಣಾ ಆಯೋಗದ ಪ್ರಕಾರ, ಶುಕ್ರವಾರ ಬೆಳಗ್ಗೆ ಆರಂಭವಾದ ಆರಂಭಿಕ ಪ್ರವೃತ್ತಿಗಳು ಪ್ರಾರಂಭವಾಗುತ್ತಿದ್ದಂತೆ, ಆಡಳಿತಾರೂಢ ಎನ್ಡಿಎ 200 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದು, 122 ಸ್ಥಾನಗಳ ಬಹುಮತದ ಗಡಿಯನ್ನು ಮೀರಿದೆ.
ಬಿಹಾರ ಚುನಾವಣೆಯಲ್ಲಿ ಜೆಡಿಯು ಅದ್ಭುತ ಪ್ರದರ್ಶನ ನೀಡಿದೆ. ಪಕ್ಷವು 82 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಫಲಿತಾಂಶಗಳಿಂದ ಹರ್ಷಗೊಂಡಿರುವ ಜೆಡಿಯು, ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂದು ಸ್ಪಷ್ಟಪಡಿಸಿದೆ.


