ಪಟನಾ : ಎನ್‌ಡಿಎ ಕೂಟದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವ ಚರ್ಚೆಗಳಿಗೆ ತೆರೆ ಎಳೆದಿರುವ ಬಿಜೆಪಿ ನಾಯಕ ಗಿರಿರಾಜ್ ಕಿಶೋರ್, ಹಾಲಿ ಸಿಎಂ ನಿತೀಶ್ ಕುಮಾರ್ ಅವರೇ ಆ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಎನ್‌ಡಿಎ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ಅಲ್ಲಗಳೆದ ಗಿರಿರಾಜ್ ಕಿಶೋರ್, ಶೀಘ್ರದಲ್ಲೇ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಸೂತ್ರವನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಪ್ರತಿಪಕ್ಷ ಮಹಾಗಠಬಂಧನದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದ ಅವರು, ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದೇ ಅವರಲ್ಲಿ ಸ್ಪಷ್ಟತೆ ಇಲ್ಲ. ತೇಜಸ್ವಿ ಯಾದವ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆರ್‌ಜೆಡಿ ಹೇಳುತ್ತಿದೆ. ಆದರೆ ಅವರು ಮಹಾಗಠಬಂಧನದ ಮುಖ್ಯಮAತ್ರಿ ಅಭ್ಯರ್ಥಿ ಅಲ್ಲ, ಕೇವಲ ಆರ್‌ಜೆಡಿ ಮುಖ್ಯಮಂತ್ರಿ ಅಭ್ಯರ್ಥಿ ಮಾತ್ರ ಎಂದು ಕಾಂಗ್ರೆಸ್ ಹೇಳಿರುವುದು ಅವರಲ್ಲಿ ಕಳವಳಕ್ಕೆ ಕಾರಣವಾಗಿದೆ ಎಂದರು. ಕಳೆದ ಬಾರಿ ಕಾಂಗ್ರೆಸ್ 7೦ ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈಗ 50-55 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ. ಹೊಸದಾಗಿ ಮಹಾಗಠಬಂಧನಕ್ಕೆ ಸೇರ್ಪಡೆಯಾಗಿರುವ ವಿಐಪಿ ಕನಿಷ್ಠ ೩೦ ಸ್ಥಾನಗಳಾದರೂ ಬೇಕು ಎನ್ನುತ್ತಿದೆ.
ಜನ್ ಸುರಾಜ್‌ನಲ್ಲೂ ಟಿಕೆಟ್‌ಗೆ ಪೈಪೋಟಿ ಬಿಹಾರದಲ್ಲಿ ಹೊಸದಾಗಿ ಕಣ ಪ್ರವೇಶಿಸುತ್ತಿರುವ ರಾಜಕೀಯ ವಿಶ್ಲೇಷಕ ಪ್ರಶಾಂತ್ ಠಾಕೂರ್ ನೇತೃತ್ವದ ಜನ್ ಸುರಾಜ್ ಪಕ್ಷದಲ್ಲೂ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಸದ್ಯದಲ್ಲೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, 100ರಿಂದ 15೦ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು. ಭಾಗಲ್ಪುರ ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿಗೆ 32 ಜನ ಆಕಾಂಕ್ಷಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಜೊತೆ ಜನ್ ಸುರಾಜ್ ಕೈಜೋಡಿಸಲಿದೆ ಎಂದು ಕೇಳಿ ಬಂದಿರುವ ವರದಿಗಳನ್ನು ಪ್ರಶಾಂತ್ ಕಿಶೋರ್ ಅಲ್ಲಗಳೆದಿದ್ದಾರೆ.
ಹಿಂದಿ ಕವಿ ರಾಮಧಾರಿ ಸಿಂಗ್ ದಿನಕರ್ ಅವರ ಪ್ರಸಿದ್ಧ ಕವಿತೆ ರಶ್ಮಿರಥಿ
ಯನ್ನು ಉಲ್ಲೇಖಿಸಿ ಎಚ್‌ಎಎಂನ ಜಿತನ್ ಮಾಂಝಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕೌರವರಲ್ಲಿ ಶ್ರೀಕೃಷ್ಣ 15 ಗ್ರಾಮವನ್ನಾದರೂ ಕೊಡು ಎಂದು ಕೃಷ್ಣ ಕೇಳುವುದನ್ನು ಈ ಸಾಲುಗಳಲ್ಲಿ ಬಣ್ಣಿಸಲಾಗಿದೆ. ಅದರಂತೆ 15 ಸ್ಥಾನವನ್ನಾದರೂ ಕೊಡಿ ಎಂದಿದ್ದಾರೆ.