ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಮತದಾನ ನಡೆದಿತ್ತು. ಇಂದು (ಫೆಬ್ರವರಿ 08) ಮತ ಎಣಿಕೆ ನಡೆಯುತ್ತಿದ್ದು, ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಎಪಿ ಅಭ್ಯರ್ಥಿ ಹಾಗೂ ದೆಹಲಿ ಸಿಎಂ ಆತಿಶಿ ಮರ್ಲೆನಾ ಅವರು ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇಂದು ಮುಂಜಾನೆಯಿಂದ ದೆಹಲಿಯ 11 ಜಿಲ್ಲೆಗಳ 19 ಎಣಿಕೆ ಕೇಂದ್ರಗಳಲ್ಲಿ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. 699 ಅಭ್ಯರ್ಥಿಗಳನ್ನು ಹೊಂದಿರುವ 70 ಸದಸ್ಯರ ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಬೆಳಿಗ್ಗೆ 7ರಿಂದ ಸಂಜೆ 6 ರವರೆಗೆ ಮತದಾನ ನಡೆಯಿತು. ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ ಶೇ. 60.54 ರಷ್ಟು ಮತದಾನ ದಾಖಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.
ಕಳೆದ 2 ವಿಧಾನಸಭಾ ಚುನಾವಣೆಗಳಲ್ಲಿ ಬಹುತೇಕ ಭರ್ಜರಿ ಗೆಲುವು ಸಾಧಿಸಿದ್ದ ಎಎಪಿ 2 ಸ್ಥಾನಗಳಲ್ಲಿ ಜಯ ಸಾಧಿಸಿದ್ದರೂ 21 ಸ್ಥಾನಗಳಲ್ಲಿ ಹಿಂದುಳಿದಿದೆ. ಒಂದೇ ಒಂದು ಸ್ಥಾನದಲ್ಲಿಯೂ ಮುನ್ನಡೆ ಸಾಧಿಸುವಲ್ಲಿ ವಿಫಲವಾದ ಕಾಂಗ್ರೆಸ್ ಸತತ ಮೂರನೇ ಬಾರಿಗೆ ಶೂನ್ಯ ಸ್ಥಾನ ಪಡೆಯುವ ಮೂಲಕ ದಾಖಲೆ ನಿರ್ಮಿಸುವ ಲಕ್ಷಣಗಳು ಕಾಣುತ್ತಿವೆ.
ದೆಹಲಿ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ನವದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಗೃಹ ಸಚಿವ ಅಮಿತ್ ಶಾ ಭೇಟಿಯಾದರು. ಅರವಿಂದ ಕೇಜ್ರಿವಾಲ್ ಸೋಲಿಸಿರುವ ಪರ್ವೇಶ್ ವರ್ಮಾ ದೆಹಲಿ ಮುಖ್ಯಮಂತ್ರಿಯಾಗಲಿದ್ದಾರೆಯೇ? ಎಂಬ ಚರ್ಚೆಗಳು ಆರಂಭವಾಗಿವೆ. ಬಿಜೆಪಿ ನಾಯಕರು ಸಿಎಂ ಅಭ್ಯರ್ಥಿ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಬಿಜೆಪಿ ಬಹುಮತ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವ ಸೇರಿ ಹಲವೆಡೆ ಇಂದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.