ನವದೆಹಲಿ : ರಾಜಧಾನಿ ದೆಹಲಿ ಮದುವಣಗಿತ್ತಿಯಂತೆ ಸಿಂಗಾರ ಗೊಂಡಿದೆ. ದೆಹಲಿಯ ಕೆಂಪುಕೋಟೆ ಮೇಲೆ ಪಿಎಂ ನರೇಂದ್ರ ಮೋದಿ 11ನೇ ಬಾರಿ ಧ್ವಜಾರೋಹಣ ಮಾಡಲಿದ್ದಾರೆ. ಪ್ರಧಾನಿ ಮೋದಿ ಬೆಳಗ್ಗೆ 7:30 ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ 140 ಕೋಟಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಐತಿಹಾಸಿಕ ಕೆಂಪುಕೋಟೆ 11ನೇ ಬಾರಿ ಪ್ರಧಾನಿ ಮೋದಿ ಭಾಷಣ ಮಾಡ್ತಿದ್ದು ಇಡೀ ದೇಶದ ಜನರ ಚಿತ್ತ ನೆಟ್ಟಿದೆ. ಜವಾಹರ್ಲಾಲ್ ನೆಹರು & ಇಂದಿರಾಗಾಂಧಿ ಅವರ ಬಳಿಕ ಕೆಂಪುಕೋಟೆಯಲ್ಲಿ ಸತತ 11ನೇ ಬಾರಿ ಸ್ವಾತಂತ್ರ್ಯ ದಿನದ ಭಾಷಣ ಮಾಡಲಿರುವ 3ನೇ ಪ್ರಧಾನಿ ಆಗಿದ್ದಾರೆ. ವಿಕಸಿತ್ ಭಾರತ್-2047ರ ಥೀಮ್ ಅಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲಾಗ್ತಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನ ಕೂಡ ನಡೆಸಲಾಗುತ್ತಿದೆ.
ಇಂದು, ನಮ್ಮೊಂದಿಗೆ ಒಲಿಂಪಿಕ್ಸ್ನಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಹಾರಿಸಿದ ಯುವಕರೂ ಇದ್ದಾರೆ. 140 ಕೋಟಿ ದೇಶವಾಸಿಗಳ ಪರವಾಗಿ, ನಾನು ನಮ್ಮ ಎಲ್ಲಾ ಕ್ರೀಡಾಪಟುಗಳು ಮತ್ತು ಆಟಗಾರರನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ, ಭಾರತದ ಬೃಹತ್ ಪಡೆ ಪ್ಯಾರಿಸ್ಗೆ ತೆರಳಲಿದೆ. ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸಲು ನಾನು ನಮ್ಮ ಎಲ್ಲಾ ಪ್ಯಾರಾಲಿಂಪಿಯನ್ಗಳಿಗೆ ಶುಭ ಹಾರೈಸುತ್ತೇನೆ.” ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.
“ಭಾರತವು ಭಾರತದಲ್ಲಿ ಜಿ 20 ಶೃಂಗಸಭೆಯನ್ನು ಆಯೋಜಿಸಿದೆ ಮತ್ತು ರಾಷ್ಟ್ರದಾದ್ಯಂತ 200 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಭಾರತವು ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಇದು ಸಾಬೀತುಪಡಿಸಿದೆ. ಇದು ಸಾಬೀತಾಗಿರುವಂತೆ, ಭಾರತದಲ್ಲಿ 2036 ರ ಒಲಿಂಪಿಕ್ಸ್ ಅನ್ನು ಆಯೋಜಿಸುವುದು ಈಗ ಭಾರತದ ಕನಸು, ಮತ್ತು ನಾವು ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.
ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಚರ್ಚೆ ನಡೆಸಿದೆ, ಹಲವು ಬಾರಿ ಆದೇಶಗಳನ್ನು ನೀಡಿದೆ. ದೇಶದ ಬಹುಪಾಲು ವರ್ಗವು ಇದರ ಬಗ್ಗೆ ಅತೀವ ನಂಬಿಕೆ ಹೊಂದಿದೆ. ಇಲ್ಲಿವರೆಗೆ ಇದ್ದ ಕೋಮು ನಾಗರಿಕ ಸಂಹಿತೆಯಿಂದ ಮುಕ್ತವಾಗಿ ದೇಶದಲ್ಲಿ ಸೆಕ್ಯುಲರ್ ಸಿವಿಲ್ ಕೋಡ್ ಜಾರಿಯಾಗುವುದು ಅಗತ್ಯವಿದೆ. ಆಗ ಮಾತ್ರ ನಾವು ಧರ್ಮದ ಆಧಾರದ ತಾರತಮ್ಯದಿಂದ ಮುಕ್ತರಾಗುತ್ತೇವೆ ಎಂದರು.
ಬಾಂಗ್ಲಾ ಹಿಂಸಾಚಾರದ ಬಗ್ಗೆಯೂ ಪ್ರಸ್ತಾಪ
ಇದೇ ವೇಳೆ ಅವರು ಕಳೆದ ಕೆಲವು ತಿಂಗಳಿಂದ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿದರು. ಬಾಂಗ್ಲಾದೇಶದ ಶೀಘ್ರದಲ್ಲೇ ಸಹಜ ಸ್ಥಿತಿ ಬರುತ್ತದೆ ಎಂಬ ಭರವಸೆ ಇದೆ. ಅದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಭಾರತ ನೀಡಲಿದೆ ಎಂದು ಹೇಳಿದರು.
ಇನ್ನು ಇದೇ ವೇಳೆ ಒಲಿಂಪಿಕ್ಸ್ ಕ್ರೀಟಾಪಟುಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಒಲಿಂಪಿಕ್ಸ್ನಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಹಾರುವಂತೆ ಮಾಡಿದ ಯುವಕರೂ ನಮ್ಮೊಂದಿಗಿದ್ದಾರೆ. 140 ಕೋಟಿ ದೇಶವಾಸಿಗಳ ಪರವಾಗಿ ನಾನು ನಮ್ಮ ಎಲ್ಲಾ ಕ್ರೀಡಾಪಟುಗಳು ಮತ್ತು ಆಟಗಾರರನ್ನು ಅಭಿನಂದಿಸುತ್ತೇನೆ ಎಂದರು.
ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಕೋಲ್ಕತ್ತಾದಲ್ಲಿ ನಡೆದಿರುವ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮಾತೆ ಸಹೋದರಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪಾಪಿಗಳನ್ನು ಗಲ್ಲಿಗೇರಿಸಬೇಕು. ಆಗ ಮಾತ್ರ ಜನರಲ್ಲಿ ಅಪರಾಧಗಳ ಬಗ್ಗೆ ಭಯ ಮೂಡಲು ಸಾಧ್ಯ. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಬಹಳ ಉಗ್ರವಾಗಿ ಧ್ವನಿ ಎತ್ತಬೇಕಿದೆ. ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರನ್ನು ವಿಳಂಬ ಮಾಡದೆ ಶಿಕ್ಷಿಸಬೇಕು ಎಂದರು.