ನವದೆಹಲಿ : ಕಾನೂನು ರಚಿಸುವುದು ಸಂಸ ತ್ತಿನ ಅಧಿಕಾರವಾಗಿದ್ದು, ಕಾಯ್ದೆಯಲ್ಲಿ ಮೇಲ್ನೋಟಕ್ಕೆ ಎದ್ದು ಕಾಣುವ ಸ್ಪಷ್ಟ ಉಲ್ಲಂಘನೆ ಇಲ್ಲದೇ ಹೋದಲ್ಲಿ ಮತ್ತು ತೀರಾ ಗಂಭೀರ ವಾದ ಸಮಸ್ಯೆಗಳು ಕಾಣದಿದ್ದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಕ್ಫ್ ಕಾಯ್ದೆ ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ಸಂದರ್ಭ ದಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯ್ ಅವರು ಈ ರೀತಿ ಹೇಳಿದ್ದಾರೆ. ಸಿಜೆಐ ಮತ್ತು ನ್ಯಾ.ಎ.ಜಿ.ಮಸೀಹ್ ಅವರ ಪೀಠ ಈ ವಿಚಾರಣೆಯನ್ನು ನಡೆಸುತ್ತಿದೆ. ವಕ್ಫ್ ಕೌನ್ಸಿಲ್ ಮತ್ತು ಬೋರ್ಡ್ಗಳಿಗೆ ಮುಸ್ಲಿಮೇತರರ ನೇಮಕ, ವಕ್ಫ್ ಬೈ ಯೂಸರ್ ಮತ್ತು ವಕ್ಫ್ ಆಸ್ತಿಯಲ್ಲಿ ಸರ್ಕಾರಿ ಆಸ್ತಿಯನ್ನು ಗುರುತು ಮಾಡುವುದು ಈ ಮೂರು ವಿಷಯಗಳ ಕುರಿತು ವಿಚಾರಣೆಗೆ ಸೀಮಿತಗೊಳಿಸಬೇಕೆಂದು ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ವಾದ ಮಂಡಿಸಿದರು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಈ ಹಿಂದಿನ ಸಿಜೆಐ ನಾವು ವಾದ ಆಲಿಸಿ, ಯಾವಗ ಮಧ್ಯಂತರ ಪರಿಹಾರ ನೀಡಲು ಸಾಧ್ಯ ಎಂದು ಹೇಳುವುದಾಗಿ ತಿಳಿಸಿದ್ದರು. ಈಗ ಕೇವಲ ಈ ಮೂರು ವಿಷಯಗಳಿಗೆ ಮಾತ್ರ ಚರ್ಚೆಯನ್ನು ಸೀಮಿತಗೊಳಿಸುವುದು ಬೇಡ ಎಂದು ವಾದಿಸಿದರು.
ವಕ್ಫ್ ಭೂಮಿಯನ್ನು ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಲುವಾಗಿ ಈ ಕಾಯ್ದೆಯನ್ನು ರೂಪಿಸಿದೆ. ನಾನು ಹಾಸಿಗೆ ಹಿಡಿದಿದ್ದು, ನನ್ನ ಆಸ್ತಿಯನ್ನು ವಕ್ಫ್ ಗೆ ನೀಡಬೇಕೆಂದಾದಲ್ಲಿ, ನಾನೊಬ್ಬ ಆಚರಣೆಯಲ್ಲಿರುವ ಮುಸ್ಲಿಂ ಎಂದು ಸಾಬೀತು ಮಾಡಬೇಕಾಗುತ್ತದೆ ಎಂದು ಕಾನೂನಿನ ಒಳಗಿರುವ ಲೋಪವನ್ನು ಎತ್ತಿ ತೋರಿಸಲು ಯತ್ನಿಸಿದರು.
ವಕ್ಫ್ ಕಾಯ್ದೆ ತಿದ್ದುಪಡಿಯು ಮುಸ್ಲಿಮರ ವಿರುದ್ಧ ತಾರತಮ್ಯ ಮತ್ತು ಇಸ್ಲಾಂ ಧಾರ್ಮಿಕ ವ್ಯವಹಾರಗಳು ಮತ್ತು ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಅನಗತ್ಯ ಹಸ್ತಕ್ಷೇಪವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಆಸ್ತಿಗಳನ್ನು ಅತಿಕ್ರಮಿಸಲು ವಕ್ಫ್ ನಿಬಂಧನೆಗಳ ದುರುಪಯೋಗವನ್ನು ತಡೆಯಲು ಈ ತಿದ್ದುಪಡಿಯನ್ನು ತರಲಾಗಿದೆ ಎಂದು ವಾದಿಸಿ ಕೇಂದ್ರ ಸರ್ಕಾರವು ಈ ತಿದ್ದುಪಡಿಯನ್ನು ಸಮರ್ಥಿಸಿಕೊಂಡಿದೆ.