ನವದೆಹಲಿ : ಲೋಕಸಭಾ ಚುವ್ನಾವಣೆಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿಸಿಕೊಂಡಿದ್ದು,ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ತೃಣಮೂಲದ ಅಭ್ಯರ್ಥಿಯಾಗಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಳತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು 42 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯೂಸುಫ್ ಪಠಾಣ್ ಹೆಸರು ಕೂಡ ಇರುವುದು ವಿಶೇಷ. ಕಾಂಗ್ರೆಸ್ ಭದ್ರಕೋಟೆ ಅಧೀರ್ ರಂಜನ್ ಚೌಧರಿ ಪ್ರತಿನಿಧಿಸುವ ಬಹರಂಪುರದಿಂದ ತೃಣಮೂಲ ಕಾಂಗ್ರೆಸ್ ಯೂಸುಫ್ ಪಠಾಣ್ ಗೆ ಟಿಕೆಟ್ ನೀಡಿದೆ.
ಪಶ್ಚಿಮ ಬಂಗಾಳದಾದ್ಯಂತ ಪಠಾಣ್ ಜನಪ್ರಿಯವಾಗಿದ್ದ ಗುಜರಾತ್ ಮೂಲದ ಯೂಸುಫ್ ಪಠಾಣ್ ಈ ಹಿಂದೆ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ. ಈ ಹಿನ್ನೆಲೆ ಬರ್ಹಾಂಪುರ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತಿನಂತಾಗಿದೆ. ಡೈಮಂಡ್ ಹಾರ್ಬರ್ನಿಂದ ಅಭಿಷೇಕ್ ಬ್ಯಾನರ್ಜಿ, ಜಾದವ್ಪುರದಿಂದ ಸಯೋನಿ ಘೋಷ್, ಅಸನ್ಸೋಲ್ನಿಂದ ಶತ್ರುಘ್ನ ಸಿನ್ಹಾ, ಬಿರ್ಭೂಮ್ನಿಂದ ಸತಾಬ್ದಿ ರಾಯ್, ಹೂಗ್ಲಿಯಿಂದ ರಚನಾ ಬ್ಯಾನರ್ಜಿ, ಕೋಲ್ಕತ್ತಾ ದಕ್ಷಿಣದಿಂದ ಮಾಲಾ ರಾಯ್, ಬಸಿರ್ಹತ್ನಿಂದ ಹಾಜಿ ನೂರುಲ್ ಇಸ್ಲಾಂ ಮತ್ತು ದಮ್ನಿಂದ ಸೌಗತಾ ರಾಯ್ ಸ್ಪರ್ಧಿಸಲಿದ್ದಾರೆ.


