ನವದೆಹಲಿ : ಭಾರತ ಫುಟ್ಬಾಲ್‌ನ ದಂತಕತೆ ಸುನಿಲ್ ಚೆಟ್ರಿ ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿ
ನಂತರ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. ಜೂ.6 ಕುವೈತ್ ವಿರುದ್ಧ ನಡೆಯಲಿರುವ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ. ನಿವೃತ್ತಿ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ .
39 ವರ್ಷದ ಸುನಿಲ್ ಚೆಟ್ರಿ 145 ಪಂದ್ಯಗಳನ್ನಾಡಿದ್ದು 20 ವರ್ಷಗಳ ವೃತ್ತಿ ಜೀವನದಲ್ಲಿ 96 ಗೋಲುಗಳನ್ನು ಹೊಡೆದಿದ್ದಾರೆ. ದೇಶಕ್ಕಾಗಿ ಮೊದಲ ಬಾರಿ ಆಡಿದ್ದು ಮರೆಯಲು ಸಾಧ್ಯವಿಲ್ಲ. ಕಳೆದ 19 ವರ್ಷ ಒತ್ತಡ ಮತ್ತು ಸಂತೋಷ ಎರಡನ್ನೂ ಅನುಭವಿಸಿದ್ದೇನೆ. ನನ್ನ ವೈಯಕ್ತಿಕ ಕಾರಣಗಳಿಗಾಗಿ ಆಡಿಲ್ಲ ದೇಶಕ್ಕಾಗಿ ಆಡಿದ್ದೇನೆ. ಮುಂದಿನ ಪಂದ್ಯ ನನ್ನ ಕೊನೆಯ ಪಂದ್ಯವಾಗಲಿದೆ ಎಂದಿದ್ದಾರೆ. ಕಳೆದ ಮಾರ್ಚ್ ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗುವಾಹಟಿಯಲ್ಲಿ 150 ನೇ ಫುಟ್‌ಬಾಲ್ ಪಂದ್ಯವಾಡಿದ್ದರು. ಈ ಪಂದ್ಯದಲ್ಲಿ ಭಾರತ 1-2 ಗೋಲುಗಳಿಂದ ಸೋಲು ಕಂಡಿತ್ತು. 2005 ರಲ್ಲಿ ಸುನೀಲ್ ಫುಟ್‌ಬಾಲ್‌ಗೆ ಪದಾರ್ಪಣೆ
ಮಾಡಿದ್ದರು. ಅವರು ಭಾರತದ ಸಾರ್ವಕಾಲಿಕ ಅತಿ ಹೆಚ್ಚು ಗೋಲು ಹೊಡೆದ ಆಟಗಾರ ಮತ್ತು ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿಯ ನಂತರ ಸಕ್ರಿಯ ಆಟಗಾರರಲ್ಲಿ ಗೋಲು ಗಳಿಸಿದವರ ಪಟ್ಟಿಯಲ್ಲಿ ಸುನೀಲ್ ಮೂರನೇ ಸ್ಥಾನದಲ್ಲಿದ್ದಾರೆ. ಚೆಟ್ರಿ ಆರು ಬಾರಿ ಎಐಎಫ್‌ಎಫ್ ವರ್ಷದ ಪ್ರಶಸ್ತಿ ಪಡೆದಿದ್ದಾರೆ. 2011ರಲ್ಲಿ ಅರ್ಜುನ ಮತ್ತು 2009ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 2008 ರಲ್ಲಿ ಎಎಫ್‌ಸಿ ಚಾಲೆಂಜ್ ಗೆದ್ದಾಗ ಚೆಟ್ರಿ ತಂಡದ ಭಾಗವಾಗಿದ್ದರು. 2011 ಮತ್ತು 2015ರಲ್ಲಿ ಸ್ಯಾಫ್ ಚಾಂಪಿಯನ್‌ಶಿಪ್. 2007,2009 ಮತ್ತು 2012ರಲ್ಲಿ ನೆಹರೂ ಕಪ್ ಮತ್ತು 2017, 2018ರಲ್ಲಿ ಇಂಟರ್‌ಕಾಂಟಿನೆಂಟಲ್ ಕಪ್ ಗೆಲ್ಲುವಲ್ಲಿ ಚೆಟ್ರಿ ಪ್ರಮುಖ ಪಾತ್ರವಹಿಸಿದ್ದಾರೆ.