ನವದೆಹಲಿ : ಇದೇ ತಿಂಗಳ 11 ರಿಂದ 14 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕ ಸರ್ಕಾರದ ಪರವಾಗಿ ಬುಧವಾರ ಖುದ್ದಾಗಿ ಆಹ್ವಾನಿಸಲಾಯಿತು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಸಚಿವೆಯನ್ನು ಭೇಟಿಯಾದ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಆಮಂತ್ರಣ ನೀಡಿದ್ದಾರೆ. ಬಳಿಕ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಎಐಸಿಸಿ ಕರ್ನಾಟಕ ಉಸ್ತುವಾರಿ,
ಸಂಸದ ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಜಾಗತಿಕ ಹೂಡಿಕೆ ಸಮಾವೇಶಕ್ಕೆ ಆಹ್ವಾನ ಪತ್ರಿಕೆ ನೀಡಿದರು. ಈ ಸಂದರ್ಭದಲ್ಲಿ ಹೂಡಿಕೆದಾರರ ಸಮಾವೇಶದ ವೈಶಿಷ್ಟ÷್ಯಗಳನ್ನು ಮತ್ತು ರಾಜ್ಯ ಸರಕಾರದ ನೂತನ ಕೈಗಾರಿಕಾ ನೀತಿ ಹಾಗೂ ಸ್ವಚ್ಛ ಇಂಧನ ನೀತಿಯ ಬಗ್ಗೆ ನಿರ್ಮಲಾ ಅವರಿಗೆ ಸಚಿವ ಪಾಟೀಲ್ ಸವಿವರ ಮಾಹಿತಿ ನೀಡಿದರು. ಸಮಾವೇಶದಲ್ಲಿ ಐದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳುಭಾಗವಹಿಸುತ್ತಿದ್ದಾರೆ.
ಒಟ್ಟಾರೆಯಾಗಿ ೩೦ಕ್ಕೂ ಹೆಚ್ಚು ಚಿಂತನಾ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಸ್ತರದ ಕೈಗಾರಿಕೆಗಳು ಹಾಗೂ ನವೋದ್ಯಮಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಭವಿಷ್ಯದ ತಂತ್ರಜ್ಞಾನ, ಆರ್ಥಿಕತೆ ಮತ್ತು ಕೈಗಾರಿಕಾ ಉದ್ಯಮ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು. ಸುಮಾರು ೧೦ ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಎಂ ಬಿ ಪಾಟೀಲ ಕೇಂದ್ರ ಸಚಿವರುಗಳಿಗೆ ಮಾಹಿತಿ ಒದಗಿಸಿದ್ದಾರೆ.