ನವದೆಹಲಿ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಪಾಕಿಸ್ತಾನದ ವಿರುದ್ಧ ಪ್ರತೀಕಾರಾತ್ಮಕವಾಗಿ ಭಾರತ ಆರಂಭಿಸಿದ್ದ ಯುದ್ಧಕ್ಕೆ ಸದ್ಯ ವಿರಾಮ ನೀಡಿದ್ದರೂ, ಮತ್ತೊಮ್ಮೆ ಪಾಕ್ ಬಾಲ ಬಿಚ್ಚಿದರೆ ಯಾರ ಮಾತನ್ನೂ ಕೇಳದೆ ಬಗ್ಗುಬಡಿಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಇದೇ ವೇಳೆ, ಇನ್ನೇನಿದ್ದರೂ ಪಾಕಿಸ್ತಾನದ ಜೊತೆಗೆ ನಮ್ಮದು ಎರಡೇ ವಿಷಯದಲ್ಲಿ ಮಾತುಕತೆ ನಡೆಯಲಿದೆ. 1. ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತ ವಾಪಸ್ ಪಡೆಯುವುದು. 2.ಭಯೋತ್ಪಾದನೆಯನ್ನು ನಿಗ್ರಹಿಸುವುದು. ಇವೆರಡರ ಹೊರತು ಬೇರಾವ ಸಂಬAಧವನ್ನೂ ಪಾಕ್ ಜೊತೆ ನಾವು ಇರಿಸಿಕೊಳ್ಳುವುದಿಲ್ಲ ಎಂದು ಪ್ರಧಾನಿ ಸೋಮವಾರ ರಾತ್ರಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಲ್ಲಿಗೆ, ಪಿಒಕೆಯನ್ನು ಭಾರತಕ್ಕೆ ಸೇರಿಸುವುದು ಕೇಂದ್ರ ಸರ್ಕಾರದ ಮುಂದಿನ ಗುರಿಯೆಂಬುದು ನಿಚ್ಚಳವಾಗಿದೆ. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೇ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೇ ನಡೆಯಲು ಸಾಧ್ಯವಿಲ್ಲ. ನೀರು ಮತ್ತು ರಕ್ತ ಒಟ್ಟಿಗೇ ಹರಿಯಲು ಸಾಧ್ಯವಿಲ್ಲ ಎಂದೂ ಮೋದಿ ಮಾರ್ಮಿಕವಾಗಿ ಹೇಳಿದ್ದಾರೆ.
ನಮ್ಮ ವೈರಿಗಳಿಗೆ ಭಾರತೀಯ ಮಹಿಳೆಯರ ಸಿಂದೂರ ಅಳಿಸಿದರೆ ಏನಾಗುತ್ತದೆ ಎನ್ನುವ ಪಾಠ ಗೊತ್ತಾಗಿದೆ. ಸಿಂದೂರ ಎನ್ನುವುದು ಸಾಮಾನ್ಯದ ಸಂಗತಿ ಅಲ್ಲ. ಆಪರೇಷನ್ ಸಿಂದೂರ್ ನ್ಯಾಯದ ಅಖಂಡ ಪ್ರತಿಜ್ಞೆ ಆಗಿದೆ. ವೈರಿಗಳು ಆಪರೇಷನ್ ಸಿಂದೂರ ಇಷ್ಟು ಕಟುವಾಗಿರುತ್ತದೆ ಎಂದು ಎಣಿಸಿರಲಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ಆರಂಭಗೊಂಡ ಬಳಿಕ ಪ್ರಧಾನಿಗಳು ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇಂದು ಸಂಜೆ 8 ಗಂಟೆಗೆ ಪ್ರಸಾರವಾದ ಭಾಷಣದಲ್ಲಿ ಅವರು ಆಪರೇಷನ್ ಸಿಂದೂರವನ್ನು ಯಶಸ್ವಿಯಾಗಿಸಿದ ಭಾರತೀಯ ಯೋಧರಿಗೆ ವಂದನೆಗಳನ್ನು ಸಲ್ಲಿಸಿದ್ದಾರೆ.
ನಂತರ, ಪ್ರಧಾನಿಗಳು ಭಯೋತ್ಪಾದಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಭಾರತೀಯ ಹೆಣ್ಮಕ್ಕಳ ಸಿಂದೂರ ಅಳಿಸಿದರೆ ಏನು ಪರಿಣಾಮ ಆಗುತ್ತದೆ ಎಂಬುದು ಎಲ್ಲಾ ಉಗ್ರ ಸಂಘಟನೆಗಳಿಗೂ ಗೊತ್ತಾಗಿದೆ. ನಮ್ಮ ಸೇನಾಪಡೆಗಳು ಉಗ್ರರ ಶಿಬಿರಗಳ ಮೇಲೆ ನಿಖರ ದಾಳಿ ನಡೆಸಿವೆ. ದೇಶ ಒಗ್ಗಟ್ಟಾಗಿದ್ದಾಗ ಇಂತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬಹುದು ಎಂದು ನರೇಂದ್ರ ಮೋದಿ ಹೇಳಿದರು.