ನವದೆಹಲಿ : ಬುಧವಾರ ಭಾರತೀಯ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಬೆಲೆಯನ್ನು ಮುಟ್ಟಿರುವ ಚಿನ್ನದ ಬೆಲೆ ಗುರುವಾರ ಸ್ಥಿರತೆ ಕಾಯ್ದುಕೊಂಡಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ದಟ್ಟವಾಗುತ್ತಿರುವ ನಡುವೆಯೇ ಯುಎಸ್ ಫೆಡರಲ್ ರಿಸರ್ವ್ ಮತ್ತೊಂದು ದರ ಕಡಿತ ಮಾಡುವ ನಿರೀಕ್ಷೆಗಳ ನಡುವೆ ಚಿನ್ನದ ಬೆಲೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದ್ದು, ಚಿನ್ನಾಭರಣ ಪ್ರಿಯರಿಗೆ ಶಾಕ್ ಕೊಟ್ಟಿದೆ.
ಬುಧವಾರ 10 ಗ್ರಾಮ್ 24 ಕ್ಯಾರೆಟ್ ಚಿನ್ನದ ಬೆಲೆ 77,020 ರೂಪಾಯಿಗಳಲ್ಲಿ ಮುಟ್ಟಿದ್ದು, ಗುರುವಾರ ಕೂಡ ಇದೇ ದರವನ್ನು ಕಾಯ್ದುಕೊಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 70,600 ರೂಪಾಯಿಗೆ ಮಾರಾಟವಾಗುತ್ತಿದೆ. 10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 57,770 ರೂಪಾಯಿ ಆಗಿದೆ. ಬುಧವಾರದಿಂದ ಗುರುವಾರಕ್ಕೆ ಬೆಲೆಗಳು ಬದಲಾವಣೆಯಾಗದೇ ಇದ್ದರೂ, ಸಾರ್ವಕಾಲಿಕ ಅಧಿಕ ದರವನ್ನು ತಲುಪಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಬೆಳ್ಳಿ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
ಭಾರತ ಮಾತ್ರವಲ್ಲಿ ಜಗತ್ತಿನಾದ್ಯಂತ ಬಂಗಾರದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಚಿನ್ನದ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಗ್ಮಾಂಟ್ ಗೋಲ್ಡ್ ಫಾರ್ ಆಲ್‌ನ ಹೆಡ್ ರಿಸರ್ಚ್ ಡಾ. ರೆನಿಶಾ ಚೈನಾನಿ, “ನವೆಂಬರ್ ತಿಂಗಳಿನಲ್ಲಿ ಫೆಡ್ ದರ ಕಡಿತ ಮಾಡುವ ನಿರೀಕ್ಷೆಯಿದ್ದು ಡಾಲರ್ ಸೂಚ್ಯಂಕವನ್ನು ದುರ್ಬಲಗೊಳಿಸಿದೆ. ಯುಎಸ್ ಡಾಲರ್ ಮೌಲ್ಯವನ್ನು ಮರಳಿ ಪಡೆಯಲು ಹೆಣಗಾಡುತ್ತಿದ್ದು, ಫೆಡ್ ಮುಖ್ಯಸ್ಥ ಜೆರೋಮ್ ಪೊವೆಲ್ ತಮ್ಮ ಭಾಷಣದಲ್ಲಿ ದರ ಕಡಿತದ ಬಗ್ಗೆ ಸುಳಿವು ಕೊಟ್ಟಿದ್ದು ಹೆಚ್ಚಿನ ಗಮನ ಸೆಳೆದಿದೆ. ಹೂಡಿಕೆದಾರರು ಚಿನ್ನದ ಮೇಲೆ ಆಸಕ್ತಿ ತೋರಿದ ಪರಿಣಾಮ ದರ ಹೆಚ್ಚಳವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದು ಕಡೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಕೂಡ ಜಾಗತಿಕ ಚಿನ್ನ, ಬೆಳ್ಳಿ ಬೆಲೆಯ ಮೇಲೆ ಪರಿಣಾಮ ಬೀರಿವೆ. ಚೀನಾದ ಆರ್ಥಿಕತೆ ಕುಸಿಯುವ ಆತಂಕದಲ್ಲಿದ್ದು, ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ಪ್ರೇರೇಪಿಸಿದೆ. ಸಾರ್ವಕಾಲಿಕ ಗರಿಷ್ಠ ದರವನ್ನು ಮುಟ್ಟಿದರೂ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತವನ್ನು ನಿರೀಕ್ಷಿಸಬಹುದು ಎಂದು ರೆನುಶಾ ಚೈನಾನಿ ಹೇಳಿದ್ದಾರೆ. ಸದ್ಯ ದರಗಳು ನಿರೀಕ್ಷೆಗಿಂತ ಹೆಚ್ಚಾಗಿದ್ದು ಯಾವುದೇ ಸಮಯದಲ್ಲಿ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 73,500 ರಿಂದ 71,000 ರೂಪಾಯಿಗೆ ಕುಸಿಯಬಹುದು ಎಂದಿದ್ದಾರೆ.