ನವದೆಹಲಿ ; ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಮುತುವರ್ಜಿ ವಹಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದ
ಸಂಸದರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶುಕ್ರವಾರ ರಾಜ್ಯದ ಸಂಸದರ ಜತೆ ಸಭೆ ನಡೆಸಿದ ಅವರು, ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ನಮ್ಮ ಯೋಜನೆಗಳು ಸರಿಯಾಗಿ ತಲುಪುತ್ತಿವೆಯಾ? ಎಂಬುದನ್ನು ಪರಿಶೀಲನೆ ನಡೆಸಿ, ಫಲಾನುಭವಿಗಳಿಗೆ ತಲುಪದೇ ಇದ್ದರೆ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ ಅವರಿಗೆ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಿ ಎಂದು ಹೇಳಿದ್ದಾರೆ.
ನಮ್ಮ ಕೃಷಿ ವಿಮಾ ಯೋಜನೆ ಕಟ್ಟ ಕಡೆಯ ರೈತರಿಗೂ ತಲುಪುವ ಹಾಗೆ ನೋಡಿಕೊಳ್ಳಿ. ಕ್ಷೇತ್ರದ ಜನರು ನಿಮಗೆ ಮತ ಹಾಕಿ ಆರಿಸಿ ತಂದಿರುತ್ತಾರೆ.
ಅವರಿಗೆ ಸರಿಯಾಗಿ ಸ್ಪಂದಿಸಿ ಅವರ ಬೇಕು ಬೇಡಗಳನ್ನು ಪೂರೈಸುವತ್ತ ಗಮನ ಹರಿಸಬೇಕು. ಯಾವುದೇ ಸಂದರ್ಭದಲ್ಲೂ ನಿಮ್ಮ ಕ್ಷೇತ್ರಗಳ ಜನರನ್ನು ಕಡೆಗಣಿಸಬೇಡಿ. ಕೆಲವೊಂದು ಸಂದರ್ಭದಲ್ಲಿ ಕೇಂದ್ರದ ಯೋಜನೆಗಳ ಕುರಿತು ತಪ್ಪು ಅಭಿಪ್ರಾಯ ಬರುವಂತೆ ಬಿAಬಿಸಲಾಗುತ್ತಿದೆ. ಅಂತಹ ಯಾವುದಕ್ಕೂ ಆಸ್ಪದ ನೀಡಬೇಡಿ. ನಿಮ್ಮ ಬಗ್ಗೆ ಯಾವುದೇ ದೂರು ಬರದಂತೆ ನಿಮ್ಮತನವನ್ನು ಕಾಯ್ದುಕೊಳ್ಳುವುದು ಇಂದಿನ ದಿನಗಳಲ್ಲಿ ತೀರ ಅಗತ್ಯವಿದೆ ಆ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದು ಪ್ರಧಾನಿ ಮೋದಿ ಎಲ್ಲ ಸಂಸದರಿಗೆ ತಿಳಿಸಿದ್ದಾರೆ.
ಯಾವುದಕ್ಕೂ ಕಾಲಹರಣ ಮಾಡದೇ ಇಡೀ ಕ್ಷೇತ್ರ ಸುತ್ತಿ. ಪ್ರತಿಯೊಬ್ಬರನ್ನೂ ಹತ್ತಿರಕ್ಕೆ ಕರೆದುಕೊಂಡು ಅವರ ಕಷ್ಟ ಸುಖಗಳನ್ನು ಆಲಿಸಿ ಅಂದಾಗ ಮಾತ್ರ ಅವರು ನಿಮಗೆ ಮತ ಹಾಕಿರುವುದಕ್ಕೆ ಸಾರ್ಥಕವಾಗುತ್ತದೆ. ನಮ್ಮ ವಿರೋಧಿ ಪಕ್ಷದವರು ತಪ್ಪು ಮಾಡುವುದನ್ನೇ ಕಾಯುತ್ತಿರುತ್ತಾರೆ. ನೀವು ನಿಮ್ಮ ಪಾಡಿಗೆ ಪಕ್ಷದ ಸಂಘಟನೆಯತ್ತ ಗಮನ ಹರಿಸಿ. ಪಕ್ಷದಲ್ಲಿ ಕೆಲಸ ಮಾಡಿದವರನ್ನು ಗುರುತಿಸಿಅಂಥವರಿಗೆ ಸನ್ಮಾನಿಸಿ. ವಿರೋಧಿಗಳ ಬಾಯಿಗೆ ಯಾವತ್ತೂ ಆಹಾರ ಆಗಬೇಡಿ ಎಂದು ಸಂಸದರಿಗೆ ಪಾಠ ಹೇಳಿದರು.


