ನವದೆಹಲಿ : ತಮಿಳುನಾಡಿನಲ್ಲಿ ತ್ರಿಭಾಷಾ ನೀತಿ ಕುರಿತು ಸಿಎಂ ಎಂ.ಕೆ ಸ್ಟಾಲಿನ್ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನಡುವಿನ ಮಾತಿನ ಸಮರ ತಾರಕ್ಕಕ್ಕೇರಿದೆ. ಸದನದಲ್ಲಿ ತ್ರಿಭಾಷಾ ಸೂತ್ರವನ್ನು ವಿರೋಧಿಸಿದ ಡಿಎಂಕೆ ಸದಸ್ಯರು ಅಪ್ರಾಮಾಣಿಕರಾಗಿದ್ದಾರೆ, ಅನಾಗರಿಕರಂತೆ ವರ್ತಿಸುವುದು ಸರಿಯಲ್ಲ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದು, ಪ್ರತಿಭಟನೆಗೆ ಕಾರಣವಾಯಿತು. ಡಿಎಂಕೆ ಶಾಸಕರು ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ, ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಅನವಶ್ಯಕವಾಗಿ ಈ ವಿಷಯದಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ ಎಂದು ಆರೋಪಿಸಿದರು.
ಬಳಿಕ ಈ ಮಾತು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅದನ್ನು ಕಡತದಿಂದ ತೆಗೆದುಹಾಕಲಾಯಿತು. ಪಿಎಂಶ್ರೀ ಶಾಲೆಗಳಿಗೆ ನಿಧಿ ಬಿಡುಗಡೆ ಮಾಡಿದ ಕುರಿತು ಎತ್ತಿದ್ದ ಪ್ರಶ್ನೆಗೆ ಪ್ರಧಾನ್ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಪ್ರಧಾನ್ ವಿರುದ್ಧ ಹರಿಹಾಯ್ದ ಡಿಎಂಕೆ ಶಾಸಕರು, ತ್ರಿಭಾಷಾ ಸೂತ್ರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಾವು ಒಪ್ಪುವುದಿಲ್ಲ ಎಂದರು. ಎನ್‌ಇಪಿ 2020 ರ ಅನುಷ್ಠಾನ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಗಳು ಒಪ್ಪಂದ ಮಾಡಿ ಕೊಂಡಾಗ ಮಾತ್ರ ಈ ನಿಧಿ ಬಿಡುಗಡೆಯಾಗುತ್ತದೆ. ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳು ಬೇಕಂತೇ ವಿರೋಧಿಸುತ್ತಿವೆ ಎಂದು ಪ್ರಧಾನ್ ಹೇಳಿದರು
ಈ ನಡುವೆ ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ದಕ್ಷಿಣ ರಾಜ್ಯಗಳ ವಿರೋಧಿ ನಿಲುವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಚರ್ಚಿಸಿದರು.
ಡಿಲಿಮಿಟೇಷನ್ ಮತ್ತಿತರ ಸಂಗತಿಗಳ ವಿಚಾರದಲ್ಲಿ ಧ್ವನಿ ಎತ್ತುವಂತೆ, ಪ್ರತಿಭಟನೆ ಜೊತೆಗೆ ನಿಲ್ಲುವಂತೆ ಚರ್ಚಿಸಿದರು. ಇದಕ್ಕೂ ಮೊದಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ದೂರವಾಣಿ ಮೂಲಕ ಮುಖ್ಯಮಂತ್ರಿಗಳ ಜೊತೆ ಇದೇ ವಿಚಾರಗಳ ಬಗ್ಗೆ ಚರ್ಚಿಸಿದರು. ತಮಿಳುನಾಡು ಸರ್ಕಾರದ ನಿಯೋಗ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆಗೆ ಚರ್ಚಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷಿಣ ರಾಜ್ಯಗಳ ಪ್ರತಿರೋಧಕ್ಕೆ ತಮ್ಮದೂ ಬೆಂಬಲ ಸೂಚಿಸಿದರು. ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ಎಲ್ಲಾ ನಡೆಗಳನ್ನೂ ತಾವು ಮುಲಾಜಿಲ್ಲದೆ ಖಂಡಿಸುತ್ತೇವೆ. ಈ ವಿಚಾರದಲ್ಲಿ ಹೋರಾಟಕ್ಕೂ ಬೆಂಬಲ ನೀಡುತ್ತೇವೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.