ನವದೆಹಲಿ : ದೇಶದಲ್ಲಿ ಮುಂದಿನ ತಿಂಗಳಿನಿಂದ ಕಾರುಗಳ ಬೆಲೆಗಳು ಏರಿಕೆಯಾಗಲಿವೆ. ಇನ್ಪುಟ್ ಮತ್ತು ಕಾರ್ಯಾಚರಣೆಯ ವೆಚ್ಚಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿವೆ.
ಮಾರುತಿ ಸುಜುಕಿ, ಮಹೀಂದ್ರಾ & ಮಹೀಂದ್ರಾ ಮತ್ತು ಹ್ಯುಂಡೈನಂಥ ವಿವಿಧ ಕಾರುಗಳ ಬೆಲೆಗಳು ಏಪ್ರಿಲ್ನಿಂದಲೇ ಹೆಚ್ಚಾಗಲಿವೆ ಎಂದು ಹೇಳಲಾಗಿದೆ. ದೇಶದ ಪ್ಯಾಸೆಂಜರ್ ಕಾರು ವಲಯದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾ ಮುಂದಿನ ತಿಂಗಳಿನಿಂದ ತನ್ನ ಎಲ್ಲಾ ಮಾದರಿಗಳ ಕಾರುಗಳ ಬೆಲೆಯನ್ನು ಶೇಕಡಾ 4 ರವರೆಗೆ ಹೆಚ್ಚಿಸಲು ಯೋಜಿಸಿದೆ. ಮಾರುತಿ ಸುಜುಕಿ ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಆಲ್ಟೋ ಕೆ -10 ನಿಂದ ಬಹು-ಉದ್ದೇಶದ ವಾಹನ ಇನ್ವಿಕ್ಟೋವರೆಗೆ ವಿವಿಧ ಮಾದರಿಗಳನ್ನು ಮಾರಾಟ ಮಾಡುತ್ತಿದೆ.
ಇವುಗಳ ಬೆಲೆ ಕ್ರಮವಾಗಿ 4.23 ಲಕ್ಷ ರೂ.ಗಳಿಂದ 29.22 ಲಕ್ಷ ರೂ.ಗಳವರೆಗೆ ಇವೆ.ಮಾರುತಿ ಸುಜುಕಿಯ ಪ್ರತಿಸ್ಪರ್ಧಿ ಹ್ಯುಂಡೈ ಮೋಟಾರ್ ಇಂಡಿಯಾ 2025 ರ ಏಪ್ರಿಲ್ ನಿಂದ ಕಾರುಗಳ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸುವುದಾಗಿ ಹೇಳಿದೆ. ಹಾಗೆಯೇ ಟಾಟಾ ಮೋಟಾರ್ಸ್ ಈ ವರ್ಷ ಎರಡನೇ ಬಾರಿಗೆ ಏಪ್ರಿಲ್ 2025 ರಿಂದ ಎಲೆಕ್ಟಿçಕ್ ವಾಹನಗಳು ಸೇರಿದಂತೆ ತನ್ನ ಪ್ರಯಾಣಿಕ ವಾಹನಗಳ ಬೆಲೆಗಳನ್ನು ಹೆಚ್ಚಿಸಲು ಉದ್ದೇಶಿಸಿದೆ. ಮಹೀಂದ್ರಾ ಮತ್ತು ಮಹೀಂದ್ರಾ ತನ್ನ ಎಸ್ ಯುವಿಗಳು ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಏಪ್ರಿಲ್ ನಿಂದ ಶೇಕಡಾ 3 ರವರೆಗೆ ಹೆಚ್ಚಿಸುವುದಾಗಿ ತಿಳಿಸಿದೆ. ಕಿಯಾ ಇಂಡಿಯಾ, ಹೋಂಡಾ ಕಾರ್ಸ್ ಇಂಡಿಯಾ, ರೆನಾಲ್ಟ್ ಇಂಡಿಯಾ ಮತ್ತು ಬಿಎಂಡಬ್ಲ್ಯೂ ಕೂಡ ಮುಂದಿನ ತಿಂಗಳಿನಿಂದ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಪ್ರಕಟಿಸಿವೆ. ಈ ಬಗ್ಗೆ ಮಾತನಾಡಿದ ಡೆಲಾಯ್ಟ್ ಪಾಲುದಾರ ಮತ್ತು ಆಟೋಮೋಟಿವ್ ವಲಯದ ನಾಯಕ ರಜತ್ ಮಹಾಜನ್, “ಭಾರತದಲ್ಲಿನ ಕಾರು ತಯಾರಕರು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಬೆಲೆ ಏರಿಕೆ ಮಾಡುತ್ತಾರೆ. ಒಂದು ಕ್ಯಾಲೆಂಡರ್ ವರ್ಷದ ಆರಂಭದಲ್ಲಿ ಮತ್ತು ಇನ್ನೊಂದು ಹಣಕಾಸು ವರ್ಷದ ಆರಂಭದಲ್ಲಿ” ಎAದು ಹೇಳಿದ್ದಾರೆ.
ಕಳೆದ ಆರು ತಿಂಗಳಲ್ಲಿ, ಯುಎಸ್ ಡಾಲರ್ ರೂಪಾಯಿ ವಿರುದ್ಧ ಸುಮಾರು ಶೇಕಡಾ 3 ರಷ್ಟು ಹೆಚ್ಚಾಗಿದೆ. ಇದು ಆಮದುಅವಲಂಬಿತ ವರ್ಗಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಹಾಗೂ ಇನ್ಪುಟ್ ವೆಚ್ಚಗಳ ಮೇಲೆ ನೇರ ಅಥವಾ ಪರೋಕ್ಷ ಪರಿಣಾಮ ಬೀರಬಹುದು. ಇದಲ್ಲದೆ, ಮೂಲ ಉಪಕರಣ ತಯಾರಕರ ಮೇಲೆ ಇದರಿಂದ ಇನ್ನೂ ಹೆಚ್ಚಿನ ಪರಿಣಾಮವಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.