ನವದೆಹಲಿ : ಕಾಂಗ್ರೆಸ್‌ಗೆ ಆದಾಯ ತೆರಿಗೆ ಇಲಾಖೆಯಿಂದ 1823.08 ಕೋಟಿ ರೂಪಾಯಿ ಪಾವತಿಸುವಂತೆ ಡಿಮಾಂಡ್ ನೋಟಿಸ್ ಜಾರಿಯಾಗಿದೆ. 2017-18 ರಿಂದ 2020-21ನೇ ಸಾಲಿನವರೆಗೆ ಪಾವತಿಸಬೇಕಾಗಿರುವ ತೆರಿಗೆ, ದಂಡ ಎಲ್ಲವೂ ಇದರಲ್ಲಿ ಸೇರಿದೆ.
ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲಿ ಈಗಾಗಲೇ ಕಾಂಗ್ರೆಸ್ ಖಾತೆಯನ್ನು ಸ್ಥಗಿತಗೊಳಿಸಿದ್ದು, ಈಗ ಜಾರಿಯಾಗಿರುವ ಹೊಸ ಡಿಮ್ಯಾಂಡ್ ನೋಟಿಸ್‌ನಿಂದ ಪಕ್ಷ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದೆ. ಪಕ್ಷವನ್ನು ಆರ್ಥಿಕವಾಗಿ ದುರ್ಬಲ ಮಾಡುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಸರ್ಕಾರ ಇಂಥ ಕ್ರಮ ಕೈಗೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿ, 210 ಕೋಟಿ ರೂಪಾಯಿ ಬಾಕಿ ವಸೂಲಿಗೆ ಆದಾಯ ತೆರಿಗೆ ಇಲಾಖೆ ಮುಂದಾಗಿತ್ತು. ಅದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಮೇಲ್ಮನವಿ ಪ್ರಾಧಿಕಾರ ತಳ್ಳಿ ಹಾಕಿತ್ತು. ಅದರ ಬೆನ್ನಲ್ಲೇ ಹೊಸ ನೋಟಿಸ್ ಜಾರಿಯಾಗಿದೆ.
ಬಿಜೆಪಿಗೂ ನೀಡಿ: ಬಿಜೆಪಿಯೂ ತೆರಿಗೆ ನಿಯಮಗಳನ್ನು ಉಲ್ಲಂಘಿಸಿದ್ದು, ಅದರ ಮೇಲೂ 4600 ಕೋಟಿ ರೂಪಾಯಿ ಪಾವತಿಸುವಂತೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡುವಂತೆ ಕಾಂಗ್ರೆಸ್ ಆಗ್ರಹಿಸಿದೆ. ತಮಗೆ ಅನ್ವಯಿಸಿರುವ ಎಲ್ಲ ಮಾನದಂಡಗಳನ್ನೂ ಬಿಜೆಪಿಯ ತೆರಿಗೆ ಸಲ್ಲಿಕೆಗೆ ಅನ್ವಯಿಸಿ ಎಂದಿರುವ ಕಾಂಗ್ರೆಸ್ ಖಜಾಂಚಿ ಅಜಯ್ ಮಾಕೆನ್ ಮತ್ತು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ತಮ್ಮ ಪಕ್ಷದ ವಿರುದ್ಧವಾಗಿ ಮಾತ್ರ ಕ್ರಮ ಕೈಗೊಳ್ಳುತ್ತಿರುವುದು ಅನ್ಯಾಯ ಟೀಕಿಸಿದ್ದಾರೆ.
ಆದಾಯ ತೆರಿಗೆ ಇಲಾಖೆಯು ಬಿಜೆಪಿಯ ಮುಂಚೂಣಿ ಸಂಸ್ಥೆಯಂತಾಗಿದೆ . ಅದರ ಮೂಲಕ ಕಾಂಗ್ರೆಸ್ ಮತ್ತು ಇತರ ಸಮಾನ ಮನಸ್ಕ ಪಕ್ಷಗಳನ್ನು ಹಣಿಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿಯ ಈ ತೆರಿಗೆ ಭಯೋತ್ಪಾದನೆ ಕುರಿತು ಇಷ್ಟರಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಸ್ಪಷ್ಟಪಡಿಸಿದರು.