ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ ಎನ್ನುವ ಕಾರಣವೊಡ್ಡಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ ಇದುವರೆಗೂ ಬಂದಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಹಾಗೆಂದ ಮಾತ್ರಕ್ಕೆ ಮತಾಂತರವಾದರೆ ಸಮಾನತೆ ಸಿಗುತ್ತದಾ ಎಂದು ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು.
ಮತಾಂತರ ಆದವರು ಲಿಂಗಾಯತ ಕ್ರಿಶ್ಚಿಯನ್,ಬ್ರಾಹ್ಮಣ ಕ್ರಿಶ್ಚಿಯನ್ ಎಂದು ಬರೆಸುವುದಕ್ಕಿಂತ ಅದೇ ಧರ್ಮವನ್ನು ಬರೆಸಿ, ಮತ್ತ್ಯಾಕೆ ಜಾತಿ ಉಲ್ಲೇಖಿಸುತ್ತೀರಿ? ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರೆ ಅವರೆಂದೂ ಪೂರ್ತಿಯಾಗಿ ಒಪ್ಪಿಕೊಳ್ಳಲ್ಲ. ವಿವಾಹ ಸಂಬAಧಗಳನ್ನೂ ಮಾಡುವುದಿಲ್ಲ.
ಪ್ರತ್ಯೇಕವಾಗಿಯೇ ನೋಡುತ್ತಾರೆ. ಇಲ್ಲೂ ಕೂಡ ಸಮಾನತೆ ಸಿಗುವುದಿಲ್ಲ ಎಂದರು.
ಕೂಲಿ ಕೆಲಸ ಮಾಡುವ ಹಿಂದೂ ಮಹಿಳೆಯನ್ನು ಕರೆದುಕೊಂಡು ಬಂದು ದಸರಾ ಉದ್ಘಾಟನೆ, ಚಾಮುಂಡಿ ತಾಯಿ ಪೂಜೆ ಮಾಡಿಸಿದ್ದರೂ ಸಿದ್ದರಾಮಯ್ಯ ಅವರನ್ನು ಗೌರವಿಸುತ್ತಿದ್ದೆವು. ಆದರೆ, ಗೋಮಾಂಸ ಭಕ್ಷಕ ಸಮಾಜದಿಂದ ಬಂದವರನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ನಿಮಗೆ ಚಾಮುಂಡಿ ತಾಯಿ ಶಾಪ ಕೊಡ್ತಾಳೆ ಎಂದು ಎಚ್ಚರಿಸಿದರು.


