ತುಮಕೂರು : ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ಒಂದೇ ವಾರದಲ್ಲಿ ಮೃತಪಟ್ಟ ಘಟನೆ ಜಿಲ್ಲೆಯ ಪಾವಗಡ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಫೆ.22ರಂದು 7 ಮಹಿಳೆಯರಿಗೆ ಆಪರೇಷನ್ ಮಾಡಿದ್ದರು. ಹೆರಿಗೆ ಸೇರಿದಂತೆ ವೈದ್ಯರು ವಿವಿಧ ಆಪರೇಷನ್ ಮಾಡಿದ್ದಾರೆ. 7 ಮಹಿಳೆಯರ ಪೈಕಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಮೂವರು ಮಹಿಳೆಯರು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.
ರಾಜವಂತಿ ಗ್ರಾಮದ ಅಂಜಲಿ (25), ಬ್ಯಾಡನೂರು ಗ್ರಾಮದ ನರಸಮ್ಮ (40) ಹಾಗೂ ವೀರಲಗೊಂದಿ ಗ್ರಾಮದ ಅನಿತಾ (30) ಮೃತ ದುರ್ದೈವಿಗಳು.ರೊಚ್ಚಿಗೆದ್ದ ಕುಟುಂಬಸ್ಥರು ಪಾವಗಡ ಪಟ್ಟಣದ ಬಳ್ಳಾರಿ ರಸ್ತೆ ತಡೆದು, ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು, ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಪಾವಗಡ ತಹಶೀಲ್ದಾರ್, ತಾಲೂಕು ವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.