ತುಮಕೂರು : ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರ ಹೊರವಲಯದ ದೇವರಾಯಪಟ್ಟಣದ ಪ್ರಾಧ್ಯಾಪಕ ವಿಲಾಸ್ ಎಂ. ಕಂದ್ರೋಳಕರ್ 59.21 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಆನ್‌ಲೈನ್ ಟ್ರೇಡಿಂಗ್ ಜಾಹೀರಾತು ವೀಕ್ಷಿಸಿ ಇವರು ವಾಟ್ಸಾಪ್ ಗ್ರೂಪ್‌ಗೆ ಸೇರಿದ್ದರು. `ನಾನು ಹೇಳಿದಂತೆ ಹಣ ವರ್ಗಾವಣೆ ಮಾಡಿದರೆ, ಅದನ್ನು ನಾವು
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಿಮಗೆ ಲಾಭ ನೀಡುತ್ತೇವೆ’ ಎಂದು ಆರೋಪಿಗಳು ತಿಳಿಸಿದ್ದಾರೆ. ಬಳಿಕ ಆಪ್ ಒಂದನ್ನು ಇನ್‌ಸ್ಟಾಲ್ ಮಾಡಿಕೊಂಡು ವಿವರ ಸಲ್ಲಿಸಿದ್ದಾರೆ. ಮೊದಲ ಬಾರಿಗೆ ರೂ. 10 ಸಾವಿರ ಹೂಡಿಕೆ ಮಾಡಿದ್ದು, ಇದಕ್ಕೆ 2 ಸಾವಿರ ಲಾಭಾಂಶ ತೋರಿಸಲಾಗಿದೆ. ಬಳಿಕ ಹಂತ ಹಂತವಾಗಿ ಒಟ್ಟು 59.21 ಲಕ್ಷವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳಲಾಗಿದೆ.
ಹಣ ವಾಪಸ್ ಕೇಳಿದಾಗ ಇನ್ನೂ ರೂ. 20 ಲಕ್ಷ ವರ್ಗಾಯಿಸಿದರೆ ಮಾತ್ರ ಬಾಕಿ ನೀಡಲಾಗುವುದು ಎಂದು ತಿಳಿಸಲಾಗಿದೆ. ಇದರಿಂದ ಅನುಮಾನಗೊಂಡು ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ವಿಲಾಸ್ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.