ತಿರುವನಂತಪುರಂ : ಪಿತೃತ್ವ ಪರೀಕ್ಷೆ ನಡೆಸಿದಲ್ಲಿ ತಾನು 24 ವರ್ಷದ ಮಹಿಳೆಯ ಅವಳಿ ಮಕ್ಕಳ ತಂದೆ ಎನ್ನುವುದು ಸಾಬೀತಾಗುತ್ತದೆ ಎಂಬ ಭೀತಿಯಿಂದ ಸೈನಿಕನೊಬ್ಬ ಸಹೋದ್ಯೋಗಿಯ ಸಹಾಯದಿಂದ ಮಹಿಳೆ ಹಾಗೂ ಅವಳಿ ಹೆಣ್ಣುಮಕ್ಕಳನ್ನು ಅಮಾನುಷವಾಗಿ ಹತ್ಯೆ ಮಾಡಿದ 19 ವರ್ಷದ ಹಿಂದಿನ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಆ ಬಳಿಕ ಇಬ್ಬರೂ ಆರೋಪಿಗಳು ಸೇನೆಯನ್ನು ತೊರೆದು ತಲೆ ಮರೆಸಿಕೊಂಡು ವಿವಾಹವಾಗಿ ಮಕ್ಕಳನ್ನು ಹೊಂದಿದ್ದಾರೆ. 19 ವರ್ಷ ಕಾಲ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡಿದ್ದ ಆಘಾತಕಾರಿ ಅಂಶ ಕೊನೆಗೂ ಬಹಿರಂಗವಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್ ಸಮೀಪದ ಯೆರಮ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ 2006 ರ ಫೆಬ್ರುವರಿ 10 ರಂದು ರಜನಿ ಎಂಬ ಮಹಿಳೆ ಹಾಗೂ ನವಜಾತ ಅವಳಿ ಹೆಣ್ಣುಮಕ್ಕಳ ಹತ್ಯೆಯಾಗಿತ್ತು. ಅವಳಿ ಮಕ್ಕಳ ಜನ್ಮ ಪ್ರಮಾಣಪತ್ರ ಪಡೆಯಲು ತೆರಳಿದ್ದ ರಜನಿ ತಾಯಿ ಪಂಚಾಯತ್ ಕಚೇರಿಯಿಂದ ಮರಳಿದಾಗ ಮೂರು ಮೃತದೇಹ ಕಂಡುಬಂದಿತ್ತು .
ಅಂಚಲ್ ಮೂಲದ ದಿವಿಲ್ ಕುಮಾರ್ ಬಿ ಎಂಬಾತ ಆಗ 28 ವರ್ಷದವನಾಗಿದ್ದು, ಭಾರತೀಯ ಸೇನೆಯ 45 ಎಡಿ ರೆಜಿಮೆಂಟ್ನಲ್ಲಿ ಪಠಾಣ್ಕೋಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈತ ರಜನಿ ಜತೆ ಪ್ರೇಮ ಸಂಬಂಧ ಹೊಂದಿದ್ದುದು ತನಿಖೆಯಿಂದ ತಿಳಿದು ಬಂದಿತ್ತು. 2006 ರ ಜನವರಿ 24 ರಂದು ಅವಳಿ ಮಕ್ಕಳು ಜನಿಸಿದ ಬಳಿಕ ಆತ ಮಹಿಳೆಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ. ಅವಿವಾಹಿತ ತಾಯಿ ಕೇರಳ ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸಿದ್ದರು. ಆಗ ಅವಳಿ ಮಕ್ಕಳ ಪಿತೃತ್ವ ಪರೀಕ್ಷೆಯನ್ನು ನಡೆಸುವಂತೆ ಆಯೋಗ ಆದೇಶ ನೀಡಿತ್ತು. ಇದರಿಂದ ಹತಾಶನಾದ ದಿವಿಲ್ ಕುಮಾರ್, ಹತ್ಯೆಯ ಸಂಚು ರೂಪಿಸಿದ ಎಂದು ಆಪಾದಿಸಲಾಗಿದೆ. ದಿವಿಲ್ ಕುಮಾರ್ ಸಹೋದ್ಯೋಗಿ ಕನ್ಣೂರು ಜಿಲ್ಲೆಯ ಶ್ರೀಕಂಠಪುರಂ ನಿವಾಸಿ ಪಿ.ರಾಜೇಶ್ (33) ಎಂಬಾತ ರಜನಿ ಮತ್ತು ಆಕೆಯ ತಾಯಿ ಜತೆ ಸ್ನೇಹ ಸಂಪಾದಿಸಿ, ರಜನಿಯನ್ನು ವಿವಾಹವಾಗುವಂತೆ ದಿವಿಲ್ ಕುಮಾರ್ ನ ಮನವೊಲಿಸುವುದಾಗಿ ಭರವಸೆ ನೀಡಿದ್ದ. ಈ ಮೂಲಕ ಆಕೆಯನ್ನು ಹಾಗೂ ಅವಳಿ ಮಕ್ಕಳನ್ನು ಹತ್ಯೆ ಮಾಡುವ ಸಂಚಿನಲ್ಲಿ ಭಾಗಿಯಾಗಿದ್ದ ಎಂದು ಸಿಬಿಐ ಅಧಿಕಾರಿ ಹೇಳಿದ್ದಾರೆ.
ಹತ್ಯೆ ಬಳಿಕ ಇಬ್ಬರೂ ತಲೆ ಮರೆಸಿಕೊಂಡಿದ್ದರು. ಅವರನ್ನು ಹುಡುಕುವ ಪ್ರಯತ್ನ ವಿಫಲವಾಗಿತ್ತು. ಆದರೆ ಇತ್ತೀಚೆಗೆ ದಿವಿಲ್ ಕುಮಾರ್ ಹಾಗೂ ರಾಜೇಶ್ ಪುದುಚೇರಿಯಲ್ಲಿ ವಾಸವಿದ್ದಾರೆ ಎಂಬ ಸುಳಿವು ದೊರಕಿತ್ತು.
ನಕಲಿ ಹೆಸರಿನಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಹೊಸ ದಾಖಲೆಗಳನ್ನು ಪಡೆದಿದ್ದರು. ನಗರದಲ್ಲಿ ಇಬ್ಬರು ಶಿಕ್ಷಕಿಯರನ್ನು ವಿವಾಹವಾಗಿ ಮಕ್ಕಳನ್ನೂ ಪಡೆದಿದ್ದರು. ಅವರ ಮೇಲೆ ನಿಗಾ ವಹಿಸಿದ ಸಿಬಿಐ ಚೆನ್ನೈ ಘಟಕದ ಸಿಬ್ಬಂದಿ ಶುಕ್ರವಾರ ಇಬ್ಬರನ್ನೂ ಬಂಧಿಸಿ ಕೊಚ್ಚಿ ನ್ ಗೆ ಕರೆ ತಂದು ಎರ್ನಾಕುಲಂ ಮುಖ್ಯ ಜ್ಯುಡೀಶಿಯಲ್ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.
ಕೇರಳದಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕಳೆದ ಮೂರು ತಿಂಗಳಿನಿಂದ ಸಿಬಿಐ ಮತ್ತು ಕೇರಳ ಪೊಲೀಸರು ರಚಿಸಿದ ತನಿಖಾ ತಂಡ 10000 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದ ನಂತರ ಈ ಇಬ್ಬರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.