ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ಬೇಗೆಗೆ ತಂಪು ಮಾಡಲು ಕಲ್ಲಂಗಡಿ ಹಣ್ಣನ್ನು ಖರೀದಿಸುತ್ತಿದ್ದಾರೆ . ನಗರದಲ್ಲಿ ತಾಪಮಾನ ಅಧಿಕಗೊಂಡಿರುವುದರಿಂದ ಸಾರ್ವಜನಿಕರು ಕಲ್ಲಂಗಡಿ ಮೊರೆ ಹೋಗಿದ್ದಾರೆ. ಫೆಬ್ರವರಿ 2 ನೇ ವಾರದಲ್ಲೇ ನಗರದ ಮಾರುಕಟ್ಟೆಗೆ ಕಲ್ಲಂಗಡಿ ಲಗ್ಗೆ ಇಟ್ಟಿದ್ದು ಈಗ ವ್ಯಾಪಾರ ಅಧಿಕಗೊಂಡಿದೆ.
ನೆರೆ ರಾಜ್ಯ ತಮಿಳುನಾಡು, ದೂರದ ಪಂಜಾಬ್‌ನಿಂದ ಕಲ್ಲಂಗಡಿ ನಗರಕ್ಕೆ ಪೂರೈಕೆಯಾಗುತ್ತಿದೆ. ರಾಜ್ಯದಲ್ಲಿ ಕಲ್ಲಂಗಡಿ ಬೆಳೆಯುವ ಪ್ರದೇಶ ಕಡಿಮೆ ಇರುವುದರಿಂದ ತಮಿಳುನಾಡನ್ನು ವರ್ತಕರು ಆಶ್ರಯಿಸಿದ್ದಾರೆ. ಅಲ್ಲದೆ ಪಂಜಾಬಿನಿಂದಲೂ ಕಲ್ಲಂಗಡಿ ಪೂರೈಕೆಯಾಗುತ್ತಿದೆ.
ಶಿವಾಜಿನಗರದ ಆಯ್ದ ವರ್ತಕರು ಮಾತ್ರ ಪಂಜಾಬ್‌ನಿಂದ ಖರೀದಿ ಮಾಡುತ್ತಿದ್ದಾರೆ. ಉಳಿದ ವರ್ತಕರು ನೆರೆ ರಾಜ್ಯ ತಮಿಳುನಾಡಿನಿಂದ ಖರೀದಿ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಜಿ ಕಲ್ಲಂಗಡಿ ದರ 25 ರೂ.ನಿಂದ 30 ರೂ.ವರೆಗೆ ಇದೆ. ಶಶಿಕಿರಣ ಸುಧಾರಿತ ತಳಿಯ ಹಣ್ಣಿಗೆ ಕೆಜಿ ದರ 30 ರಿಂದ 35 ರೂ. ಇದೆ .
200ರಿಂದ 250 ಟನ್ ಕಲ್ಲಂಗಡಿ ಪೂರೈಕೆ: ಫೆಬ್ರವರಿಯಿಂದ ಏಪ್ರಿಲ್‌ವರೆಗೆ ನಗರದಲ್ಲಿ ಅಂದಾಜು200 ರಿಂದ 250 ಟನ್ ಕಲ್ಲಂಗಡಿ ಹಣ್ಣು ಅವಶ್ಯಕತೆ ಇದೆ. ರಾಜ್ಯದಲ್ಲಿ ಅಲ್ಲಲ್ಲಿ ಮಾತ್ರ ಕಲ್ಲಂಗಡಿ ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ ಪ್ರದೇಶದ ವಿಸ್ತಾರ ಕೂಡ ಕಡಿಮೆ. ಹೀಗಾಗಿ ರಾಜ್ಯದ ಬಹುತೇಕ ವರ್ತಕರು ನೆರೆ ರಾಜ್ಯ ತಮಿಳುನಾಡು ರಾಜ್ಯದಲ್ಲಿ ಬೆಳೆಯುವ ಕಲ್ಲಂಗಡಿ 50 ಟನ್ ಕೂಡ ತಲುಪುವುದಿಲ್ಲ. ಹೀಗಾಗಿ ವರ್ತಕರು ತಮಿಳುನಾಡಿನ ರೈತರಿಂದ ಹಣ್ಣು ಖರೀದಿ ಮಾಡುತ್ತಾರೆ.
ಎಲ್ಲಿಂದ ಪೂರೈಕೆ: ತಮಿಳುನಾಡಿನ ತಿರುವಣ್ಣಾಮಲೈ, ಚೆಂಗಲ್‌ಪೇಟ್, ವಿಲ್ಲುಪುರಂ ಮತ್ತು ಕಡಲೂರು ಜಿಲ್ಲೆಗಳಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆಯುತ್ತಾರೆ. ಇಲ್ಲಿಂದ ಬೆಂಗಳೂರು , ಮೈಸೂರು, ಮಂಗಳೂರು, ಮುಂಬೈ ಸೇರಿದಂತೆ ವಿವಿಧ ಕಡೆಗಳಿಗೆ ಪೂರೈಕೆಯಾಗುತ್ತದೆ.


