ಕ್ಯಾಲಿಫೋರ್ನಿಯಾ : ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ವಿರುದ್ಧ ಆತಿಥೇಯ ವೆಸ್ಟ್ ಇಂಡೀಸ್ ಒಂಬತ್ತು ವಿಕೆಟ್‌ಗಳಿಂದ ಭರ್ಜರಿ ಜಯಭೇರಿ ಬಾರಿಸಿದೆ. ಆರಂಭಿಕ ಆಟಗಾರ ಶಾಯ್ ಹೋಪ್ ಅಜೇಯ 82 ರನ್ ಗಳಿಸುವ ಮೂಲಕ ತಂಡದ ಚೇಸಿಂಗ್ ಅನ್ನು ಸರಳಗೊಳಿಸಿದರು. ಈ ಗೆಲುವಿನೊಂದಿಗೆ ವಿಂಡೀಸ್ ತಂಡವು ಸೂಪರ್ 8 ಹಂತದ ಗ್ರೂಪ್ ಬಿಯಲ್ಲಿ ಮೊದಲ ಗೆಲುವು ದಾಖಲಿಸಿ ಎರಡನೇ ಸ್ಥಾನಕ್ಕೇರಿದೆ. ನಿನ್ನೆಯಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಇಂಗ್ಲೆಂಡ್ ಮೂರನೇ ಸ್ಥಾನಕ್ಕೆ ಜಾರಿದೆ. ಇದರೊಂದಿಗೆ ಸೆಮಿಫೈನಲ್ ತಲುಪುವ ತಂಡಗಳು ಯಾವುವು ಎಂಬ ಕುತೂಹಲ ಹೆಚ್ಚಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಯುಎಸ್, 19.5 ಓವರ್‌ಗಳಲ್ಲಿ 128 ರನ್‌ಗಳಿಗೆ ಆಲೌಟ್ ಆಯ್ತು. ಇದಕ್ಕೆ ಪ್ರತಿಯಾಗಿ ಚೇಸಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್, ಕೇವಲ 10.5 ಓವರ್‌ಗಳಲ್ಲಿ 1 ವಿಕೆಟ್ ಮಾತ್ರ ಕಳೆದುಕೊಂಡು 130 ರನ್ ಗಳಿಸಿ ಸುಲಭ ಜಯ ದಾಖಲಿಸಿತು. ಈ ಜಯದೊಂದಿಗೆ ವೆಸ್ಟ್ ಇಂಡೀಸ್ ಗ್ರೂಪ್ 2 ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.
ಸರಳ ಗುರಿ ಬೆನ್ನಟ್ಟಿದ ಆತಿಥೇಯರಿಗೆ ಉತ್ತಮ ಆರಂಭ ಸಿಕ್ಕಿತು ಮೊದಲ ವಿಕೆಟ್‌ಗೆ ಜಾನ್ಸನ್ ಚಾರ್ಲ್ಸ್ ಮತ್ತು ಶಾಯ್ ಹೋಪ್ 67 ನರ್ ಒಟ್ಟುಗೂಡಿಸಿದರು. ಈ ನಡುವೆ 14 ಎಸೆತಗಳಲ್ಲಿ 15 ರನ್ ಗಳಿಸಿದ್ದ ಚಾರ್ಲ್ಸ್ ಔಟಾದರು. ಆದರೆ ಹೋಪ್ ಅಜೇಯ 82 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿಕೆಟ್ ಕೀಪರ್ ಹಾಗೂ ಬಲಗೈ ಬ್ಯಾಟರ್ ಕೇವಲ 39 ಎಸೆತಗಳಲ್ಲಿ ಎಂಟು ಸ್ಫೋಟಕ ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸಹಿತ ಅಜೇಯ 82 ರನ್ ಸಿಡಿಸಿದರು. ಇದೇ ವೇಳೆ ನಿಕೋಲಸ್ ಪೂರನ್ ಕೇವಲ 12 ಎಸೆತಗಳಲ್ಲಿ 27 ರನ್ ಸಿಡಿಸಿ ಕೆನ್ಸಿಂಗ್ಟನ್ ಓವಲ್‌ನಲ್ಲಿ ಯುಎಸ್ಎ ಬೌಲರ್‌ಗಳ ಬೆವರಿಳಿಸಿದರು.
ಯುಸ್ ಸಾಧಾರಣ ಮೊತ್ತ
ಮೊದಲು ಬ್ಯಾಟಿಂಗ್ ನಡೆಸಿದ ಯುಎಸ್ ತಂಡವನ್ನು ವಿಂಡೀಸ್ ಬೌಲರ್‌ಗಳು ಬಿಡದೆ ಕಾಡಿದರು. ಆಲ್‌ರೌಂಡರ್ ಆಂಡ್ರೆ ರಸೆಲ್ 31 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರೆ, ರೋಸ್ಟನ್ ಚೇಸ್ ಕೇವಲ 19 ರನ್ ಕೊಟ್ಟು 3 ಪ್ರಮುಖ ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಯುಎಸ್ ಪರ ಸ್ಟೀವನ್ ಟೇಲರ್ 2 ರನ್ ಗಳಿಸಿದರೆ, ಆಂಡ್ರೀಸ್ ಗೌಸ್ 29 ಹಾಗೂ ನಿತೀಶ್ ಕುಮಾರ್ 20 ರನ್ ಕಲೆ ಹಾಕಿದರು.
ಯುಎಸ್ ವಿಕೆಟ್ ಉರುಳುತ್ತಲೇ ಇದ್ದುದರಿಂದ ರನ್ ವೇಗವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಯುಎಸ್ಎ ನಾಯಕ ಆರೋನ್ ಜೋನ್ಸ್ 11 ರನ್ ಮಾತ್ರ ಗಳಿಸಿದರು. ಅನುಭವಿ ಆಟಗಾರ ಕೋರೆ ಆಂಡರ್ಸನ್ ಏಳು ರನ್ ಗಳಿಸುವಷ್ಟರಲ್ಲಿ ಸುಸ್ತಾದರು. ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಬ್ಬರಿಸಿದ್ದ ಹರ್ಮೀತ್ ಸಿಂಗ್, ಗೋಲ್ಡನ್ ಡಕ್ ಆದರು.