ಭಾರತದ ನಂ.1 ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ದೇಶದಲ್ಲಿ ಮತ್ತೊಂದು ಐತಿಹಾಸಿಕ ಘೋಷಣೆ ಮಾಡುವ ಮೂಲಕ ದೇಶದ ಟೆಲಿಕಾಂ ಲೋಕವನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ಕಳೆದ ಐದು ವರ್ಷಗಳ ಹಿಂದೆ ಜಿಯೋ 4G ಸೇವೆಗಳು ಆರಂಭವಾದಾಗ ಎಲ್ಲಾ 4G ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬರೋಬ್ಬರಿ ಒಂದು ವರ್ಷ ಉಚಿತ ಸೇವೆಯನ್ನು ಒದಗಿಸಲಾಗಿತ್ತು. ಇದೀಗ ಹೊಸದಾಗಿ ಜಿಯೋ 5G ಸೇವೆ ಪಡೆಯುತ್ತಿರುವ ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್ ಒಂದನ್ನು ಪ್ರಕಟಿಸಲಾಗಿದೆ. ದೇಶದಲ್ಲಿ ಜಿಯೋ 5G ಸೇವೆ ಪಡೆಯುವ ಎಲ್ಲಾ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ಗ್ರಾಹಕರು ಪ್ರಸ್ತುತ ಕನಿಷ್ಠ 239 ರೂ. ರೀಚಾರ್ಜ್ ಯೋಜನೆಗೆ ಚಂದಾದಾರರಾಗಿದ್ದರೆ ಅನಿಯಮಿತ 5G ಡೇಟಾ ದೊರೆಯಲಿದೆ ಎಂದು ಜಿಯೋ ಕಂಪೆನಿ ತಿಳಿಸಿದೆ.
ಪ್ರಸ್ತುತ ಜಿಯೋ 4G ಸೇವೆಯನ್ನು ಬಳಸುತ್ತಿರುವ ಗ್ರಾಹಕರು 5G ಸೇವೆಗಳನ್ನು ಬಳಸುವುದಕ್ಕಾಗಿ ಕನಿಷ್ಠ 239 ರೂ. ಯೋಜನೆಗೆ ರೀಚಾರ್ಜ್ ಮಾಡಿಸಿರಬೇಕು. 5G ಸಾಮರ್ಥ್ಯದ ಸ್ಮಾರ್ಟ್‌ಫೋನ್ ಹೊಂದಿರುವ ಜಿಯೋ 4G ಗ್ರಾಹಕರು 5G ಸೇವೆ ಪಡೆಯಲು ಕಂಪೆನಿಯಿಂದ ಆಹ್ವಾನವನ್ನು ಸ್ವೀಕರಿಸುತ್ತಾರೆ. ಈ ವೇಳೆ ಅವರು 239 ರೂ.ಗಿಂತ ಹೆಚ್ಚಿನ ಬೆಲೆಯ ಯೋಜನೆಗೆ ಗ್ರಾಹಕರಾಗಿದ್ದರೆ ಅನಿಯಮಿತ 5G ಡೇಟಾ ದೊರೆಯಲಿದೆ. ಜಿಯೋ ಮುಂದಿನ ಪ್ರಕಟಣೆ ಹೊರಡಿಸುವವರೆಗೂ ಈ ಆಫರ್ ಇರುತ್ತದೆ. ಆದರೆ, ಇದು ಜಿಯೋ 5G ಸೇವೆಗಳನ್ನು ಪಡೆಯಲು ಪಾವತಿಸಬೇಕಾದ ನಿರ್ಧಿಷ್ಟ ಬೆಲೆಯಲ್ಲ. ಈ ಆಫರ್ ಮುಂದಿನ ಆರು ತಿಂಗಳಿನಿಂದ ಒಂದು ವರ್ಷವೇ ಇರಬಹುದು ಎಂದು ಜಿಯೋ ಅಧಿಕಾರಿಗಳು ತಿಳಿಸಿದ್ದಾರೆ.