ಚಿತ್ರದುರ್ಗ : ಜಿಲ್ಲೆಯ ಗಂಜಿಗುಂಟೆ ಗ್ರಾಮದ ತೆಂಗಿನ ತೋಟಗಳಲ್ಲಿ ಕಪ್ಪು ತಲೆಹುಳು ಭಾದೆಯಿಂದ ಕಲ್ಪವೃಕ್ಷ ಎಂದು ಕರೆಯಿಸಿಕೊಳ್ಳುವ ತೆಂಗಿನ ಗಿಡಗಳು ಒಣಗತ್ತಿದ್ದು ತೆಂಗು ಬೆಳೆಗಾರರಲ್ಲಿ ಆತಂಕ ಶುರುವಾಗಿದೆ.
ಕಷ್ಟಪಟ್ಟು ಸುಮಾರು ಏಳೆಂಟು ವರ್ಷ ಬೆಳೆಸಿದ ತೆಂಗು ಬೆಳೆ ಸಂಪೂರ್ಣ ರೋಗಕ್ಕೆ ತುತ್ತಾಗುತ್ತಿದೆ. ರೋಗದಿಂದಾಗಿ ಗರಿಗಳು ಸಂಪೂರ್ಣವಾಗಿ ಒಣಗೆ ಕಾಯಿ ಬಿಡದಂತಾಗಿದೆ. ವಿಷಯ ತಿಳಿದುತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿರೂಪಾಕ್ಷಪ್ಪ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಳಿಕ ಮಾತನಾಡಿದ ಅವರು ಹೊಸದುರ್ಗದಿಂದ ಚಳ್ಳಕೆರೆ ಭಾಗಕ್ಕೆ ಕೆಲ ರೈತರು ತೆಂಗಿನ ಸಸಿಗಳನ್ನು ತಂದು ನಾಟಿ ಮಾಡಿದ್ದು ಅಲ್ಲಿನ ಕಪ್ಪು ತಲೆ ಹುಳುಗಳ ಸಂತತಿಯಿಂದಾಗಿ ತೆಂಗಿನ ಗಿಡಗಳಿಗೆ ಕಂಟಕವಾಗಿದೆ ಎಂದು ಮಾಹಿತಿ ನೀಡಿದರು.
ಕಪ್ಪು ತಲೆ ಹುಳು ಗರಿಯ ಕೆಳಭಾಗದಲ್ಲಿ ಸಂಪೂರ್ಣ ರಸವನ್ನು ಹೀರುವುದರಿಂದ ಗರಿ ಒಣಗಿದ ರೀತಿಯಲ್ಲಿ ಬಿಳಿ ಬಣ್ಣಕ್ಕೆ ತಿರುಗುತ್ತದೆ ಇದರಿಂದ ಗಿಡದ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತದೆ ಇದರಿಂದ ರಕ್ಷಣೆ ಮಾಡಿಕೊಳ್ಳಲು ಇಲಾಖೆಯಲ್ಲಿ ಸೌಲಭ್ಯವಿರುವ ಪರೋಪ ಜೀವಿಗಳು ತಂದು ಗಿಡಗಳಿಗೆ ಬಿಡಬೇಕು ಆಗ ರೋಗವನ್ನು ನಾಶ ಮಾಡುತ್ತವೆ ಗಿಡದ ಬೆಳವಣಿಗೆಗೆ 2 ಕೆಜಿ ಬೇವಿನ ಹಿಂಡಿ ಬುಡಕ್ಕೆ ಸುತ್ತಲೂ ಹಾಕಿ ನೀರು ಹಾಕಬೇಕು ಎಂದು ಸಲಹೆ ನೀಡಿದರು.


